ಬೆಂಗಳೂರು: ಬಯೋಕಾನ್ ಅಂಗಸಂಸ್ಥೆ ಬಯಾಲಜಿಕ್ಸ್ ಕಂಪನಿಯ ‘ಇನ್ಸುಲಿನ್ ಅಸ್ಪಾರ್ಚ್’ ಔಷಧಿಗೆ 3ನೇ ಹಂತದ ಪ್ರಯೋಗ ಇಲ್ಲದೇ ಅನುಮೋದನೆ ನೀಡಲು 4 ಲಕ್ಷ ರೂ. ಲಂಚ ಸ್ವೀಕರಿಸಿದ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಜಂಟಿ ನಿಯಂತ್ರಕ ಎಸ್. ಈಶ್ವರ ರೆಡ್ಡಿ ಸೇರಿ ಬಯೋಕಾನ್ ನ ಐವರನ್ನು ಸಿಬಿಐ ಆಧಿಕಾರಿಗಳು ಬಂಧಿಸಿದ್ದಾರೆ.
ಬಯೋಕಾನ್ ಬಯೋಲಾಜಿಕಲ್ ನ ಉಪ ಮುಖ್ಯಸ್ಥ ಎಲ್.ಪ್ರವೀಣ್ ಕುಮಾರ್, ಸಿನರ್ಜಿ ನೆಟ್ವರ್ಕ್ ಇಂಡಿಯಾ ಪ್ರೈ.ಲಿ.ನ ನಿರ್ದೇಶಕ ದಿನೇಶ್ ದುವಾ ಮತ್ತು ಗುಲ್ಜೀತ್ ಸೇತಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಅಲ್ಲದೇ ಡಿಸಿಜಿಐನ ಸಹಾಯಕ ಔಷಧ ಪರೀಕ್ಷಕ ಅನಿಮೇಶ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಹಿಂದೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಜಂಟಿ ನಿರ್ದೇಶಕ ಎಸ್.ಈಶ್ವರ ರೆಡ್ಡಿ ಅವರನ್ನು ಸಹ ಸಿಬಿಐ ಬಂಧಿಸಿತ್ತು. ಈ ಪ್ರಕರಣದಲ್ಲಿ ಒಟ್ಟಾರೆ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಈಶ್ವರ್ ರೆಡ್ಡಿ ಜೊತೆಗೆ ಸಿನರ್ಜಿ ನೆಟ್ ವರ್ಕ್ ಇಂಡಿಯಾ ಲಿಮಿಟೆಡ್ ಕಂಪನಿಯ ನಿರ್ದೇಶಕ ದಿನೇಶ್ ದುವಾ ಅವರನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಂಚ ಪ್ರಕರಣ ಸಂಬಂಧ ಇನ್ನೂ ಹಲವರ ಬಂಧನ ಶೀಘ್ರದಲ್ಲೇ ನಡೆಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮ್ಮ ಉತ್ಪನ್ನಗಳಿಗೆ ಯುರೋಪ್ ಹಾಗೂ ಇತರ ವಿದೇಶಗಳಲ್ಲಿ ಈಗಾಗಲೇ ಅನುಮತಿ ಸಿಕ್ಕಿದೆ. ಹಾಗಿದ್ದ ಮೇಲೆ ಲಂಚ ನೀಡಿ ದೇಶದಲ್ಲಿ ಅನುಮತಿ ಪಡೆಯುವುದು ನಮಗೆ ಬೇಕಿಲ್ಲ. ನಾವು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಎಲ್ಲ ಪ್ರಕ್ರಿಯೆಗಳನ್ನು ಪಾಲಿಸುತ್ತಿದ್ದೇವೆ ಎಂದು ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ನೇತೃತ್ವದ ಬಯೋಕಾನ್ ಕಂಪನಿಯ ವಕ್ತಾರರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
2022ರ ಮೇ 18ರಂದು ವಿಷಯ ತಜ್ಞರ ಸಭೆಯಲ್ಲಿ ಇನ್ಸುಲಿನ್ ಆ್ಯಸ್ಪಾರ್ಟ್ ಇಂಜೆಕ್ಷನ್ ಗೆ ಪರವಾಗಿ ಶಿಫಾರಸು ಮಂಡಿಸಲು ರೆಡ್ಡಿಗೆ ಒಟ್ಟಾರೆ 9 ಲಕ್ಷ ರೂ. ಲಂಚ ನೀಡಲು ತೀರ್ಮಾನಿಸಲಾಗಿತ್ತು ಎಂದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ.