ಡ್ರಗ್ಸ್ ಕೇಸ್ | ಕೇರಳ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಬಂಧನ

Prasthutha|

ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಬಂಧನವಾಗಿದೆ. ಎನ್ ಸಿಬಿ ಅಧಿಕಾರಿಗಳು ಬಿನೀಶ್ ಅವರನ್ನು ಬಂಧಿಸಿದ್ದು, ಪ್ರಸ್ತುತ ಅವರು ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಶದಲ್ಲಿದ್ದಾರೆ.

ಕಮ್ಮನಹಳ್ಳಿಯಲ್ಲಿ ಅನೂಪ್ ಎಂಬವರು ಆರಂಭಿಸಿದ ರೆಸ್ಟೋರೆಂಟ್ ಗೆ ಬಿನೀಶ್ ಕೂಡ ಸುಮಾರು 50 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಅನೂಪ್ ಈಗಾಗಲೇ ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿರುವ ಅನೂಪ್, ಅನಿಕಾ ಡಿ., ರವೀಂದ್ರನ್ ಎಂಬವರ ಜೊತೆ ಬಿನೀಶ್ ಗೆ ನಂಟಿತ್ತು ಎಂದು ವರದಿಗಳು ತಿಳಿಸಿವೆ.

- Advertisement -

ಬೆಂಗಳೂರಿನ ಡ್ರಗ್ಸ್ ಜಾಲದಲ್ಲಿ ಅನೂಪ್ ಹೆಸರೂ ಕೇಳಿಬಂದಿದ್ದು, ಅವರಿಗೆ ಸೇರಿರುವ ಹೋಟೆಲ್ ಗೆ ಬಿನೀಶ್ ಕೂಡ ಹೂಡಿಕೆ ಮಾಡಿರುವ ಶಂಕೆಯಿಂದ ಅವರ ವಿಚಾರಣೆಯೂ ನಡೆಯಲಿದೆ.

ಅಕ್ರಮ ಹಣ ವರ್ಗಾವಣೆ, ಪಿಎಂಎಲ್ ಎ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಬಿನೀಶ್ ಅವರನ್ನು ಅ.6ರಂದು ಬೆಂಗಳೂರಿನ ಎನ್ ಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಅನೂಪ್ ನನ್ನ ಸ್ನೇಹಿತ, ಆತನಿಗೆ ಹಣಕಾಸು ತೊಂದರೆಯಿದ್ದುದರಿಂದ 6 ಲಕ್ಷ ರೂ. ನೀಡಿದ್ದೆ, ಇನ್ನೊಮ್ಮೆ 15,000 ರೂ. ನೀಡಿದ್ದೆ ಎಂದು ಬಿನೀಶ್ ಹೇಳಿಕೆ ನೀಡಿದ್ದರು ಎಂದು ವರದಿಯೊಂದು ತಿಳಿಸಿದೆ.

ಕೇರಳ ಹಾಗೂ ಕರ್ನಾಟಕದ ನಟ, ನಟಿಯರು, ಸೆಲೆಬ್ರಿಟಿಗಳು, ಉದ್ಯಮಿಗಳ ಸಂಪರ್ಕ ಹೊಂದಿದ್ದ ಅನೂಪ್ ಡ್ರಗ್ ಪೆಡ್ಲರ್ ಆಗಿ ಮಾದಕ ದ್ರವ್ಯಗಳ ಮಾರಾಟ ಮಾಡುತ್ತಿದ್ದ ಎಂಬುದು ಪತ್ತೆಯಾಗಿದೆ. ಅನೂಪ್ ಮತ್ತು ಬಿನೀಶ್ ಹಣಕಾಸು ವ್ಯವಾಹಾರ ವಿದೇಶಕ್ಕೂ ವ್ಯಾಪಿಸಿದ್ದು, ಈ ಸಂಬಂಧ ತನಿಖೆ ನಡೆಯಲಿದೆ ಎಂದು ವರದಿಯಾಗಿದೆ.

- Advertisement -