ಬಿಲ್ಕಿಸ್ ಬಾನು ನಿಲ್ಲದ ದಶಕಗಳ ರೋದನ

Prasthutha|

ಅತ್ಯಾಚಾರಿಗಳ ಬಿಡುಗಡೆ ಭಾರತದ ನೈತಿಕ ಅಧಃಪತನದ ಸೂಚನೆ

- Advertisement -

ದೆಹಲಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿ ಎಂದಿನಂತೆ ಆಕರ್ಷಕ ಮಾತುಗಳನ್ನಾಡುತ್ತಾ, ನಾರಿ ಶಕ್ತಿಯ ಪ್ರಸ್ತಾಪ ಮಾಡುತ್ತಾರೆ. ಮಗದೊಂದೆಡೆ, ಬಿಲ್ಕೀಸ್ ಬಾನು ಮತ್ತು ಅವರ ಕುಟುಂಬದ ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿ ಅಪರಾಧಿಗಳು ಸನ್ನಡತೆಯ ಕಾರಣವೊಡ್ಡಿ ಬಿಡುಗಡೆ ಆಗುತ್ತಾರೆ; ಮಾತ್ರವಲ್ಲ, ಅವರನ್ನು ಸನ್ಮಾನಿಸುವ ನೀಚ ಮನಸ್ಥಿತಿಯ ಜನರು ಮತ್ತೊಂದು ಕಡೆ ಕಂಡುಬರುತ್ತಾರೆ. ಜಗತ್ತಿನ ಇತಿಹಾಸದಲ್ಲಿ ನಿಕೃಷ್ಟ ಸಮಾಜ ಇದಲ್ಲದೆ ಬೇರೆ ಯಾವುದಿದೆ? ಮಾನವೀಯತೆ ನಾಚಿ ನೀರಾಗುವಂತೆ ಅವರು ವರ್ತಿಸಿದ್ದಾರೆ. ಕ್ಷಮಾಪಣೆ, ಉತ್ತಮ ಗುಣನಡತೆ ಎಂದರೇನು?


ಜೈಲು ಜೀವನ ಎನ್ನುವುದು ಅಪರಾಧಿಗಳಿಗೆ ಮನಃ ಪರಿವರ್ತನೆಗೆ ಇರುವ ದಾರಿ. ಪ್ರಚೋದನೆಗೊಳಗಾಗಿ ಅಪರಾಧವೆಸಗಿದಾಗ, ಅದರ ಪಶ್ಚಾತ್ತಾಪವು ಜೈಲಿನೊಳಗೆ ಖಂಡಿತಾ ಆಗುತ್ತದೆ. ಆದರೆ ಮನುಷ್ಯತ್ವ ವಿರೋಧಿ, ಗಂಭೀರ ಪ್ರಕರಣಗಳು ಮತ್ತು ಪೂರ್ವನಿಯೋಜಿತ ಕೃತ್ಯವೂ ಈ ಸಾಲಿಗೆ ಸೇರುವುದಿಲ್ಲ. ಅಂತಹ ಅಪರಾಧಿಗಳು, ಎಂದಿಗೂ ಸಮಾಜದ ಪಾಲಿಗೆ ಕಂಟಕರೇ ಆಗಿರುತ್ತಾರೆ. ಅಂತಹ ಗುಂಪುಗಳು ಕೂಡ ಗುಣನಡತೆಯ ಕಾರಣದಿಂದ ಜೈಲಿನಿಂದ ಬಿಡುಗಡೆಯಾದರೆ ಅಂತಹ ಸಮಾಜಘಾತುಕ ವ್ಯಕ್ತಿಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಗುಜರಾತ್ ಸರಕಾರ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಮೂಲಕ ಹಲವು ಕೆಟ್ಟ ಸಂದೇಶಗಳನ್ನು ದೇಶಕ್ಕೆ ನೀಡಿದೆ ಎಂದೇ ಹೇಳಬಹುದು.

- Advertisement -


ಬಿಲ್ಕೀಸ್ ಬಾನು ಪ್ರಕರಣ ನಡೆದಿದ್ದು ಪೂರ್ವ ನಿಯೋಜಿತ ಗಲಭೆಯ ಸಂದರ್ಭದಲ್ಲಿ. ಬಿಲ್ಕೀಸ್ ಬಾನು ಮತ್ತು ಇತರ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇತರ ಕುಟುಂಬದ ಸದಸ್ಯರು ತಮ್ಮ ಜೀವವನ್ನು ಕಳೆದುಕೊಂಡಿದ್ದರು. ಇದು ಭಾರತದ ಇತಿಹಾಸದಲ್ಲಿ ದಾಖಲಿಸಲ್ಪಟ್ಟ ಅತೀ ಹೀನ ಗಲಭೆ. ಇತರ ಎಲ್ಲಾ ಪ್ರಕರಣಗಳು ನ್ಯಾಯವನ್ನು ನೀಡದಾದಾಗ ಬಿಲ್ಕೀಸ್ ಪ್ರಕರಣದ ತೀರ್ಪು ಸಮಾಜದ ಸ್ವಸ್ಥ ಮನಸ್ಸುಗಳಿಗೆ ಅಲ್ಪ ನಿರಾಳತೆ ತಂದಿತ್ತು. ಕನಿಷ್ಠ ಪಕ್ಷ, ಅತ್ಯಾಚಾರದ ಕೃತ್ಯಕ್ಕಾದರೂ ಶಿಕ್ಷೆ ನೀಡಲ್ಪಟ್ಟಿದೆ ಎಂದು ಸಮಾಧಾನ ಪಟ್ಟಿದ್ದರು. ನಿರ್ಭಯಾ, ಅಸಿಫಾಳಂತಹ ಹಲವಾರು ಹೆಣ್ಣು ಮಕ್ಕಳು, ಹತ್ರಾಸ್ ನಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇರುವಾಗ, ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವುದು ಸಮಾಜದ ಕನಿಷ್ಠ ಪ್ರಜ್ಞೆಯಾಗಿದೆ. ಈ ನಿಟ್ಟಿನಲ್ಲಿ ಬಿಲ್ಕೀಸ್ ಬಾನು ಪ್ರಕರಣದ ತೀರ್ಪು ಚೇತೋಹಾರಿಯಾಗಿತ್ತು.


ಎರಡನೇಯದಾಗಿ, ನ್ಯಾಯಕ್ಕಾಗಿ ಹೋರಾಡುವ ಹಲವು ಮನಸ್ಸುಗಳಿಗೆ ಬಿಲ್ಕೀಸ್ ಬಾನು ಸ್ಫೂರ್ತಿಯ ಸೆಲೆಯಾಗಿದ್ದಳು. ತನ್ನ ಮೇಲೆ ಮೃಗಗಳ ರೀತಿ ದಾಳಿ ನಡೆದು ದೈಹಿಕವಾಗಿ ಜರ್ಝರಿತಗೊಂಡು ಇಡೀ ಕುಟುಂಬವನ್ನು ಕಳೆಕೊಂಡರೂ, ಪುರುಷ ಪ್ರಧಾನ ಸಮಾಜದಲ್ಲಿ ಜೀವಿಸಿ ನ್ಯಾಯಕ್ಕಾಗಿ ಹೋರಾಡಿದ ಬಿಲ್ಕೀಸ್ ಬಾನು ಹೊಸ ಅಧ್ಯಾಯವನ್ನು ಬರೆದಿದ್ದಳು. ಒಂದು ಸರಕಾರದ ವಿರುದ್ಧ ನಿಂತು ಎಲ್ಲಾ ಅಧಿಕಾರದ ಕೇಂದ್ರಗಳನ್ನು ಎದುರು ಹಾಕಿ, ಬಲಿಷ್ಠ ಸಮಾಜಘಾತುಕ ಸಂಘಟನೆಯ ವಿರುದ್ಧ ನಿರಂತರ ಹೋರಾಟ ಮಾಡುವುದು ಸಿನಿಮಾದಲ್ಲಿ ತೋರಿಸಿದಷ್ಟು ಸುಲಭವಲ್ಲ. ಧೃತಿಗೆಡದೆ ಆಕೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿರುದ್ಧ ಸಮಾಜದ ಎಲ್ಲಾ ಕೆಟ್ಟ ಸಂಪ್ರದಾಯಗಳನ್ನು ಬದಿಗೊತ್ತಿ ಹೋರಾಡಿದ ಅನುಭವ ಬಹಳ ದೊಡ್ಡದು. ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳನ್ನು ತಪ್ಪಿತಸ್ಥರೆಂದು ಬಿಂಬಿಸುವ ಸಮಾಜ; ಸಮಾಜದಿಂದ ಬಹಿಷ್ಕಾರಗೊಳಿಸುವ ಅಪಾಯವಿದ್ದ ಕಾಲದಲ್ಲಿ; ಆಧುನಿಕತೆಗೆ ಇನ್ನೂ ಒಗ್ಗದ ಕಾಲಘಟ್ಟದಲ್ಲಿ ಜನರ ಒಪ್ಪಿತ ಮನಸ್ಥಿತಿಯ ವಿರುದ್ಧವಾಗಿ ಚಲಿಸುವುದು ಎಂದರೆ ತನ್ನ ಪ್ರಾಣವನ್ನು ಪಣಕ್ಕಿಡುವುದು ಎಂದೇ ಅರ್ಥ. ಆದರೆ ಸಾವಿನ ಹತ್ತಿರ ಹೋಗಿ ಬಂದಂತಹ ಬಿಲ್ಕೀಸ್ ಬಾನು ಮಗದೊಮ್ಮೆ ಸಾವಿಗೆ ಭಯಪಡುವ ಅಗತ್ಯವಿಲ್ಲ ಎಂಬ ದೃಢನಿರ್ಧಾರ ಕೈಗೊಂಡಂತೆ ಕಾಣುತ್ತದೆ. ಹಾಗಾಗಿ ತನ್ನ ಪ್ರಾಣಕ್ಕೆ ಅಪಾಯವಾದರೂ ಸರಿ, ಹೋರಾಡುವೆ ಎಂದು ಆ ಉಕ್ಕಿನ ಮಹಿಳೆ ದೃಢ ಪ್ರತಿಜ್ಞೆ ಮಾಡಿದ್ದಳು. ಇಂದಿನ ಅಪರಾಧಿಗಳ ಬಿಡುಗಡೆ, ಅವಳ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ. ಮುಂದೆ ಹೋರಾಡುವ ಮನಸ್ಸುಗಳನ್ನು ತಲ್ಲಣಗೊಳಿಸುವ ಪ್ರಕ್ರಿಯೆಯಾಗಿದೆ. ಹೆಣ್ಣಿನ ಹೋರಾಟವನ್ನು ಹತ್ತಿಕ್ಕುವ ಘಟನೆಯಾಗಿದೆ ಎಂದೇ ಹೇಳಬಹುದು. ಅತ್ಯಾಚಾರಕ್ಕೊಳಗಾದವರು ಹೋರಾಟದಿಂದ ಹಿಂದೆ ಸರಿಯುವ ಅಪಾಯ ನಿಚ್ಚಳವಾಗಿದೆ.


ಅತ್ಯಾಚಾರಿಗಳು ಬಿಡುಗಡೆಗೊಂಡಾಗ ಅವರ ಸಂಸ್ಕಾರ, ನಡತೆಯ ಬಗ್ಗೆ ಕೂಡ ಚರ್ಚೆಯಾಗಿತ್ತು. ಅವರು ಬ್ರಾಹ್ಮಣರು, ಸಂಸ್ಕಾರವಂತರು ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಬ್ರಾಹ್ಮಣರ ತಪ್ಪನ್ನು ಮನ್ನಿಸುವ ಪ್ರಯತ್ನವನ್ನು ಮಾಡಲಾಗಿದೆ. ಅತ್ಯಾಚಾರಿಗಳು ಸಂಸ್ಕಾರವಂತರಾಗುವುದು ಹೇಗೆ? ಸಂಸ್ಕಾರವಂತರು ಗ್ಯಾಂಗ್ ರೇಪ್ ಮಾಡತ್ತಾರೆಯೇ?. ಇತ್ತೀಚೆಗೆ ಬ್ರಾಹ್ಮಣ್ಯವನ್ನು ವೈಭವೀಕರಿಸುವ ಪ್ರಯತ್ನ ಹೆಚ್ಚು ನಡೆಯುತ್ತಿದೆ ಎಂಬುದು ಸುಳ್ಳಲ್ಲ. ಬ್ರಾಹ್ಮಣ್ಯ ಎಂದರೆ ಇದೇ ಆಗಿರುತ್ತದೆ; ಈ ಹೇಳಿಕೆಗಳಿಂದ ಅವರು ಬಯಸುವುದು, ಹಲವಾರು ವರ್ಷಗಳಿಂದ ವರ್ಣಪದ್ಧತಿಯ ಮೂಲಕ ಕೆಳವರ್ಗದ ಹೆಣ್ಣು ಮಕ್ಕಳ ಮೇಲೆ ದೇವರ ಹೆಸರಿನಲ್ಲಿ ಅತ್ಯಾಚಾರ ಮಾಡುತ್ತಿದ್ದ ಮೇಲ್ವರ್ಗದವರು, ಈಗ ಆಧುನಿಕ ಸಮಾಜದಲ್ಲಿ ಅದೇ ಜಾತಿಗಳಿಂದ ಅತ್ಯಾಚಾರದ ಕಾರಣಕ್ಕೆ ಪುರಸ್ಕರಿಸಲ್ಪಡುತ್ತಿದ್ದಾರೆ. ಇದು ಸ್ತನ ತೆರಿಗೆ ಹಾಕುತ್ತಿದ್ದ ಮೇಲ್ವರ್ಗದವರಿಗೆ ಸಹಜ ಸ್ವಾಭಾವಿಕ ಕ್ರಿಯೆಯಾಗಿದೆ. ಆದರೆ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಗುವ ಈ ಕಾಲಘಟ್ಟದಲ್ಲಿ ಇದು ಯಾವುದೇ ಕಾರಣಕ್ಕೂ ಅವಗಣನೆಗೆ ಒಳಪಡುವ ಕ್ರಿಯೆಯಲ್ಲ. ದುರದೃಷ್ಟವಶಾತ್, ತಮ್ಮ ಬಗ್ಗೆ ಇತರರು ಮಾತಾಡಿದರೆ ಮುಗಿಬೀಳುವ ಮೇಲ್ವರ್ಗದವರು ಮತ್ತು ಅವರ ಗುಲಾಮರು ಆತ್ಮಸಾಕ್ಷಿಯಿಲ್ಲದೆ ಮೌನಿಯಾಗಿದ್ದಾರೆ. ಡೋಂಗಿ ಮಹಿಳಾವಾದಿಗಳು ಮಹಿಳಾ ಪ್ರಜ್ಞೆಯನ್ನು ಬದಿಗಿಟ್ಟು ತಾವು ನೈಜ ಗುಲಾಮರು ಎಂದು ಖಾತರಿಪಡಿಸುವ ಉತ್ಸಾಹದಲ್ಲಿದ್ದಾರೆ. ಸವರ್ಣೀಯರು ತಪ್ಪೆಸಗಿದಾಗ ಮೌನಿಯಾಗಿರುವ ಮಾಧ್ಯಮಗಳು ಎಂದಿನಂತೆ ನಿದ್ರಿಸುವ ನಾಟಕ ಮಾಡುತ್ತಿದೆ. ‘ಬ್ರಾಹ್ಮಣರು ಸಂಸ್ಕಾರವಂತರು’ ಎಂಬ ಪದವೇ ಅಪಾಯಕಾರಿಯಾಗಿದೆ. ಭವಿಷ್ಯದ ದೇಶದ ಸ್ವರೂಪ ಹೇಗಿರಲಿದೆ ಎಂಬುದನ್ನು ಈ ಘಟನೆಯಿಂದ ನಾವು ಅರಿತುಕೊಳ್ಳಬಹುದಾಗಿದೆ.


ಗುಜರಾತ್ ಸರಕಾರ ಬಿಡುಗಡೆ ಮಾಡಿದ ಕಾನೂನು ಪ್ರಕ್ರಿಯೆಯೂ ಕೂಡ ಸರಿಯಾಗಿಲ್ಲ ಎಂದು ಕಾನೂನು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೈದಿಗಳ ಬಿಡುಗಡೆಗೆ ಸಂಬಂಧಿಸಿ ಗುಜರಾತ್ ಸರಕಾರದ ನಿಯಮಗಳು 2014ರಲ್ಲಿ ಬದಲಾಗಿವೆ. ಈ ಹಿಂದೆ 1992ರ ನೀತಿಯು ಅನ್ವಯವಾಗುತ್ತಿತ್ತು. ಆದರೆ 2014ರ ನೀತಿಯ ಮೂಲಕ ಹಳೆಯ ನೀತಿಯು ಮಾನ್ಯತೆ ಕಳೆದುಕೊಳ್ಳುತ್ತದೆ. ಆದರೆ 11 ಜನ ಅಪರಾಧಿಗಳ ಬಿಡುಗಡೆಗೆ ಗುಜರಾತ್ ಸರಕಾರ 1992ರ ನೀತಿಯನ್ನು ಉಪಯೋಗಿಸಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ. ಸಾಮೂಹಿಕ ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ಕ್ಷಮಾಪಣೆಗೆ ಅರ್ಹವಲ್ಲ ಎಂದು ನೀತಿ ಹೇಳುತ್ತಿದ್ದರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರೆ ಇದರಲ್ಲಿ ಪ್ರಭುತ್ವದ ನೇರ ಸಹಕಾರ ಇದೆ ಎಂದೇ ಹೇಳಬಹುದು. ಆದರೆ ಬಿಡುಗಡೆಯ ವಿರುದ್ಧ ಬಂದ ರಿಟ್ ಸ್ವೀಕರಿಸುವ ಮೂಲಕ ಸುಪ್ರೀಂಕೋರ್ಟ್ ಸರಿಯಾದುದನ್ನೇ ಮಾಡಿದೆ. ಸಮಾಜದ ಸ್ವಾಸ್ಥ್ಯವನ್ನು ಉಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪು ಬಹಳ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ.
ಬಿಲ್ಕೀಸ್ ಬಾನು ಪ್ರಕರಣದ ಅಪರಾಧಿಗಳು ಎಂದಿಗೂ ಕ್ಷಮೆಗೆ ಅರ್ಹರಲ್ಲ ಅವರನ್ನು ಪುರಸ್ಕರಿಸುವ ಸಮಾಜ ಎಂದಿಗೂ ಸ್ವಸ್ಥ ಸಮಾಜ ಅಲ್ಲ ಎಂದೇ ನಾವು ಭಾವಿಸಬೇಕಾಗಿದೆ. ಮಹಿಳಾ ಸಂವೇದನೆಗಳು ಹೆಚ್ಚು ಜಾಗೃತಗೊಳ್ಳಬೇಕಾದ ಅಗತ್ಯತೆ ಈ ಹಿಂದೆಂದಿಗಿಂತಲೂ ಹೆಚ್ಚಿದೆ.

Join Whatsapp