ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳನ್ನು ಮರಳಿ ಜೈಲಿಗೆ ಕಳುಹಿಸಬೇಕು: ಬಿಲ್ಕಿಸ್‌ ಪರ ವಕೀಲೆ ಶೋಭಾ ವಾದ ಮಂಡನೆ

Prasthutha|

ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಹಲವರ ಕೊಲೆ ಪ್ರಕರಣದ ಎಲ್ಲಾ 11 ಮಂದಿ ಅಪರಾಧಿಗಳನ್ನು ಮರಳಿ ಜೈಲಿಗೆ ಕಳುಹಿಸಬೇಕು ಎಂದು ಬಿಲ್ಕಿಸ್‌ ಪರ ವಕೀಲೆ ಶೋಭಾ ಗುಪ್ತಾ ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.

- Advertisement -

ನವದೆಹಲಿ: 11 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಗುಜರಾತ್ ಸರ್ಕಾರವು ಅವರ ಶಿಕ್ಷೆ ಕಡಿತಗೊಳಿಸಿ ಬಿಡುಗಡೆಗೊಳಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮುಂದೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್‌ ಭುಯನ್‌ ಅವರ ಪೀಠ ನಡೆಸುತ್ತಿದೆ.

2002ರ ಗುಜರಾತ್‌ ಗಲಭೆಗಳ ಸಂದರ್ಭ ಬಿಲ್ಕಿಸ್‌ ಬಾನು ಮೇಲೆ ಸಾಮೂಹಿಕ ಅತ್ಯಾಚಾರಗೈದು ಆಕೆಯ ಕುಟುಂಬದ 14 ಮಂದಿಯನ್ನು ಹತ್ಯೆಗೈದ ಪ್ರಕರಣ ಇದಾಗಿದೆ. 11 ಜನ ಅಪರಾಧಿಗಳನ್ನು ಕಳೆದ ವರ್ಷದ ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದಿನದಂದು ಬಿಡುಗಡೆಗೊಳಿಸಲಾಗಿತ್ತು.

- Advertisement -

ಅವರನ್ನು ಬಿಡುಗಡೆಗೊಳಿಸುವ ಮುನ್ನ ಅಪರಾಧದ ಸ್ವರೂಪವನ್ನು, ಅದು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಸರ್ಕಾರ ಪರಿಗಣಿಸಬೇಕಿತ್ತು ಎಂದು ಬಿಲ್ಕಿಸ್‌ ಬಾನು ಪರ ವಕೀಲೆ ಹೇಳಿದ್ದು, ಅವರು ನಡೆಸಿದ ಬರ್ಬರ ಅಪರಾಧವನ್ನು ಪರಿಗಣಿಸಿ ಮತ್ತೆ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಿಕ್ಷೆ ಕಡಿತಗೊಳಿಸುವುದು ಸುಧಾರಣೆಗೆ ಅಗತ್ಯ ಎಂದು ಅಪರಾಧಿಗಳಲ್ಲೊಬ್ಬರು ವಾದಿಸಿರುವ ಬಗ್ಗೆ ಜಸ್ಟಿಸ್‌ ನಾಗರತ್ನ ಉಲ್ಲೇಖಿಸಿದಾಗ, ಅವರ ಅಪರಾಧದ ಸ್ವರೂಪ ಯಾವುದೋ ಬಂದೂಕಿನಿಂದ ಗಾಯ ಉಂಟು ಮಾಡಿರುವುದು ಅಥವಾ ಸಾಮಾನ್ಯ ಕೊಲೆ ಪ್ರಕರಣವಲ್ಲ ಎಂದು ಗುಪ್ತಾ ವಾದಿಸಿದ್ದಾರೆ.



Join Whatsapp