ದೆಹಲಿ: ಬಿಲ್ಕಿಸ್ ಬಾನು ಪ್ರಕರಣಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ವಿನಾಯಿತಿ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಎಲ್ಲ 11 ಅಪರಾಧಿಗಳು ಮತ್ತೆ ಜೈಲಿಗೆ ಹೋಗಬೇಕಾಗಿದೆ.
11 ಅಪರಾಧಿಗಳಿಗೆ ನೀಡಿದ್ದ ವಿನಾಯಿತಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಜನವರಿ 8ರಂದು ರದ್ದುಗೊಳಿಸಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 11 ಜನರನ್ನು ಅಕಾಲಿಕವಾಗಿ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ತೀರ್ಪು ನೀಡಲಾಗಿದೆ.
2022 ಆಗಸ್ಟ್ ನಲ್ಲಿ ದೋಷಿಗಳ ಬಿಡುಗಡೆಗೆ ನಿರ್ಧಾರ ಕೈಗೊಂಡ ಪ್ರಕ್ರಿಯೆಗಳನ್ನು ಒಳಗೊಂಡ ಮೂಲ ಕಡತಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು.
2002ರ ಗುಜರಾತ್ ಗಲಭೆಯ ಸಂದರ್ಭ ರಕ್ಷಿಸಿಕೊಳ್ಳಲು ಕುಟುಂಬದೊಂದಿಗೆ ಪರಾರಿಯಾಗಲು ಪ್ರಯತ್ನಿಸುತ್ತಿರುವಾಗ ಸಾಮೂಹಿಕವಾಗಿ ಅತ್ಯಾಚಾರಕ್ಕೆ ಒಳಗಾದ ಸಂದರ್ಭ ಬಾನುವಿಗೆ 21 ವರ್ಷ ವಯಸ್ಸು. ಅಲ್ಲದೆ, ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಆರೋಪಿಗಳು ಅವರ ಮೂರು ವರ್ಷದ ಪುತ್ರಿ ಸೇರಿದಂತೆ ಅವರ ಕುಟುಂಬದ 7 ಮಂದಿಯನ್ನು ಹತ್ಯೆಗೈದಿದ್ದರು.