8 ವರ್ಷದ ಮುಸ್ಲಿಮ್ ಬಾಲಕನನ್ನು ಬಂಧಿಸಿ, ಹಣದ ಬೇಡಿಕೆಯಿಟ್ಟ ಬಿಹಾರ ಪೊಲೀಸರು

Prasthutha|

ಪಾಟ್ನಾ: ಇತ್ತೀಚೆಗೆ ಬಿಹಾರದ ಸಿವಾನ್ ಜಿಲ್ಲೆಯ ಬರ್ಹರಿಯಾ ನಗರದಲ್ಲಿ ನಡೆದ ಮುಸ್ಲಿಮ್ ವಿರೋಧಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 8 ವರ್ಷದ ಮುಸ್ಲಿಮ್ ಬಾಲಕ ಸೇರಿದಂತೆ ಹಲವು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದ್ದು, ಬಾಲಕನ ಬಿಡುಗಡೆಗೆ ಪೊಲೀಸರು ಹಣದ ಬೇಡಿಕೆಯಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

ಬಿಹಾರದಲ್ಲಿ ನಡೆದ ಮುಸ್ಲಿಮ್ ವಿರೋಧಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಸೀದಿಯಿಂದ 8 ವರ್ಷದ ಬಾಲಕ ರಿಝ್ವಾನ್ ಖುರೇಷಿ, ಆತನ ತಾತ ಮುಹಮ್ಮದ್ ಯಾಸೀನ್ ಸೇರಿದಂತೆ ನೂರಾರು ಮುಸ್ಲಿಮ್ ಯುವಕರನ್ನು ಹಿಂಸಾಚಾರಕ್ಕೆ ಪ್ರಚೋದನೆಯ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತರೆಲ್ಲರೂ ನಿರಪರಾಧಿಗಳಾಗಿದ್ದು, ತಕ್ಷಣ ಬಿಡುಗಡೆಗೊಳಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಈ ಮಧ್ಯೆ 70 ವರ್ಷದ ಮುಹಮ್ಮದ್ ಯಾಸೀನ್ ಮತ್ತು ಅವರ ಎಂಟು ವರ್ಷದ ಮೊಮ್ಮಗ ರಿಝ್ವಾನ್ ಖುರೇಸಿಯನ್ನು ಬಂಧಿಸಿದ್ದು, ಇಬ್ಬರೂ ಹಿಂಸಾಚಾರದ ಬಲಿಪಶುಗಳೆಂದು ಕುಟುಂಬಸ್ಥರು ದೂರಿದ್ದಾರೆ. ಅಲ್ಲದೆ ಯಾಸೀನ್ ಇತ್ತೀಚೆಗೆ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

- Advertisement -

ನನ್ನ ಕಿರಿಯ ಸಹೋದರ ರಿಝ್ವಾನ್ ಖುರೇಷಿಯನ್ನು ಪ್ರತ್ಯೇಕ ಸೆಲ್’ನಲ್ಲಿ ಇರಿಸಲಾಗಿತ್ತು ಮತ್ತು ಕುಟುಂಬದ ಸದಸ್ಯರಿಗೆ ಭೇಟಿಯಾಗಲು ಅನುಮತಿ ನೀಡಲಾಗಿಲ್ಲ. ಆತನ ಕೈಗೆ ಕೋಳವನ್ನು ತೊಡಿಸಲಾಗಿತ್ತು ಮತ್ತು ಹೆದರುತ್ತಿದ್ದನು ಎಂದು ಆತನ ಸಹೋದರ ಅಝರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯಾಸೀನ್ ಅವರ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಕುಟುಂಬ, ಬಾಲಕನ ಜನನ ಪ್ರಮಾಣಪತ್ರವನ್ನು ಸಲ್ಲಿಸಿದೆ. ಆದರೆ ಪೊಲೀಸ್ ಅಧಿಕಾರಿಗಳು ಆತನ ಬಿಡುಗಡೆಗೆ ಹಣದ ಬೇಡಿಕೆಯನ್ನಿಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಂಘಪರಿವಾರದ ಕಾರ್ಯಕರ್ತರು ಮಹಾವೀರ್ ಅಖಾರ ಜಾಥಾವನ್ನು ಮುಸ್ಲಿಮ್ ಬಾಹುಳ್ಯದ ಬರ್ಹರಿಯ ಎಂಬಲ್ಲಿ ಆಯೋಜಿಸ ಪರಿಣಾದ ಹಿಂಸಾಚಾರ ಭುಗಿಲೆದ್ದಿತ್ತು. ಸಂಘಪರಿವಾರದ ಕಾರ್ಯಕರ್ತರು ಜಾಥಾದ ಮೂಲಕ ಮುಸ್ಲಿಮ್ ಬಾಹುಳ್ಯದ ಪ್ರದೇಶಕ್ಕೆ ಬಂದಾಗ ಇಸ್ಲಾಮ್ ವಿರೋಧಿ ಮತ್ತು ಪ್ರಚೋದನಕಾರಿ ಘೋಷಣೆ ಕೂಗುತ್ತಿರುವ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವೇಳೆ ಅವರು ಮಾರಕಾಯುಧಗಳನ್ನು ಹೊಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Join Whatsapp