ಪಾಟ್ನಾ: ಬಿಹಾರದ 16 ಜಿಲ್ಲೆಗಳಲ್ಲಿ ಬಿರುಗಾಳಿ, ಸಿಡಿಲು ಮತ್ತು ಭಾರೀ ಮಳೆಗೆ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಲಿಕಲ್ಲು ಮಳೆಯಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ. ಬೆಳೆ ಮತ್ತು ಮನೆ ಹಾನಿಯನ್ನು ಅಂದಾಜಿಸಿ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸೂಚನೆ ನೀಡಲಾಗುವುದು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಮೇ 19 ರ ಮಧ್ಯಾಹ್ನದಿಂದ ಬಿಹಾರದ ಹಲವಾರು ಜಿಲ್ಲೆಗಳಲ್ಲಿ ಬಲವಾದ ಗಾಳಿ ಮತ್ತು ಮಿಂಚು ಸಹಿತ ಭಾರೀ ಮಳೆಯು ಅಪ್ಪಳಿಸಿದ್ದು, ಸಾವಿರಾರು ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ವಾಹನ ಪ್ರಯಾಣ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ.
ಮುಂದಿನ ಎರಡು ದಿನಗಳವರೆಗೆ ಬಿಹಾರದೆಲ್ಲೆಡೆ ಗಂಟೆಗೆ 30/40 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಗಾಳಿ ಬೀಸಲಿದೆ ಎಂದು ಪಾಟ್ನಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಹಾರದ ಜಿಲ್ಲೆಗಳಾದ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಶೆಯೋಹರ್, ಸಿತಾಮರ್ಹಿ, ಮುಜಾಫರ್‌ಪುರ್, ದರ್ಭಾಂಗಾ, ಮಧುಬನಿ, ಸಹರ್ಸಾ, ಮಾಧೆಪುರ, ಸುಪೌಲ್, ಅರಾರಿಯಾ, ಕಿಶನ್‌ಗಂಜ್, ಪೂರ್ಣಿಯಾ ಮತ್ತು ಕತಿಹಾರ್‌ಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.