ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಬಿದ್ದ ಜೋಡಿ: ವಿದ್ಯಾರ್ಥಿನಿ ಮೃತ್ಯು, ಯುವಕ ಗಂಭೀರ

Prasthutha|

ಬೆಂಗಳೂರು: ವೀಕೆಂಡ್ ಶಾಪಿಂಗ್ ಗೆ ಬಂದಿದ್ದ ಯುವಕ-ಯುವತಿ ಸಾರ್ವಜನಿಕರೆದುರೇ ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಕೆಳಗೆ ಬಿದ್ದ ಘಟನೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಶನಿವಾರ ನಡೆದಿದ್ದು, ಯುವತಿ ಮೃತಪಟ್ಟಿದ್ದಾಳೆ.

- Advertisement -

ಲಿಯಾ (19) ಸಾವನ್ನಪ್ಪಿದ ಯುವತಿ. ಲಿಯಾ ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಅದೇ ಕಾಲೇಜಿನ ಪೀಟರ್ ಎಂಬಾತನೊಂದಿಗೆ ಶಾಪಿಂಗ್ ಗೆ ಬಂದಿದ್ದರು.
ಯುವಕ ಆಂಧ್ರಪ್ರದೇಶ ಮೂಲದವನಾಗಿದ್ದು, ಯುವತಿ ಬೆಂಗಳೂರಿನವರಾಗಿದ್ದಾರೆ. ಶನಿವಾರ ಸ್ನೇಹಿತರೊಂದಿಗೆ ಶಾಪಿಂಗ್ ಗೆ ಬಂದಿದ್ದ ಇವರಿಬ್ಬರೂ ವಾಶ್ ರೂಂಗೆ ಹೋಗಿ ಬರುವುದಾಗಿ ಹೇಳಿ ಸ್ಟೇರ್ ಕೇಸ್ ಕಡೆಗೆ ಹೋಗಿದ್ದಾರೆ. ಇಬ್ಬರೂ ಅಲ್ಲಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಈ ವೇಳೆ ಯುವತಿಯ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಆಕೆಯನ್ನು ಕಬ್ಬನ್ ಪಾರ್ಕ್ ಪೊಲೀಸರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಯುವಕನ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಕಾಲು ಜಾರಿ ಬಿದ್ದಾಗ ಆಕೆಯನ್ನು ಹಿಡಿಯಲು ಹೋದ ಯುವಕ ಪೀಟರ್ ಕೂಡ ಕೆಳಗೆ ಬಿದ್ದಿದ್ದಾರೆ. ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಯುವಕನ ಸ್ನೇಹಿತರು ಸ್ಪಷ್ಟಪಡಿಸಿದ್ದಾರೆ.

- Advertisement -

ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp