ದಕ್ಷಿಣ ಆಫ್ರಿಕಾ: ಅಂಡರ್-19 ವಿಶ್ವಕಪ್ನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತ ಕಿರಿಯರ ತಂಡ ನ್ಯೂಜಿಲೆಂಡ್ ತಂಡದ ವಿರುದ್ಧ 214 ರನ್ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 4 ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದೆ.
ದ. ಆಫ್ರಿಕಾದ ಮ್ಯಾಂಗೌಂಗ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 296 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್, 28.1 ಓವರ್ಗಳಲ್ಲಿ ಕೇವಲ 81 ರನ್ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿದೆ.
ಕಿವೀಸ್ ಪರ ಜಾಕ್ಸನ್ 19, ಕಮ್ಮಿಂಗ್ 16, ಥಾಂಪ್ಸನ್ 12, ನೆಲ್ಸನ್ 10 ರನ್ ಗಳಿಸಿದರು. ಉಳಿದಂತೆ ಯಾವ ಬ್ಯಾಟರ್ ಸಹ ಎರಡಂಕಿ ದಾಟಲಿಲ್ಲ. ಮೂವರು ಶೂನ್ಯಕ್ಕೆ ನಿರ್ಗಮಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ದೊಡ್ಡ ಮೊತ್ತ ಕಲೆ ಹಾಕಿತು. ಮುಶೀರ್ ಖಾನ್ ಟೂರ್ನಿಯಲ್ಲಿ ಸತತ ಎರಡನೇ ಶತಕ (131) ಸಿಡಿಸಿದ್ದಾರೆ. ಆದರ್ಶ್ ಸಿಂಗ್ 52 ರನ್ ಗಳಿಸಿದ್ದಾರೆ. ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 295 ರನ್ ಗಳಿಸಿತು. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಮುಶೀರ್ ಬೌಲಿಂಗ್ನಲ್ಲೂ ಮಿಂಚಿದ್ದು,,2 ವಿಕೆಟ್ ಪಡೆಯವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತದ ಪರ ಸೌಮ್ಯ ಪಾಂಡೆ ಅತಿ ಹೆಚ್ಚು ವಿಕೆಟ್ ಕಬಳಿಸಿದರು. 10 ಓವರ್ಗೆ ಕೇವಲ 19 ರನ್ ನೀಡಿ 4 ವಿಕೆಟ್ ಪಡೆದರು. ರಾಜ್ ಲಿಂಬಾನಿ ಹಾಗೂ ಮುಶೀರ್ ತಲಾ 2, ನಮನ್ ಹಾಗೂ ಅರ್ಶಿನ್ ಒಂದೊಂದು ವಿಕೆಟ್ ಪಡೆದರು.