ನವದೆಹಲಿ: ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಅವರಿಗೆ ಚುನಾವಣಾ ಆಯೋಗದಿಂದ ದೊಡ್ಡ ಹಿನ್ನಡೆಯಾಗಿದೆ. ತಾವೇ ಕಟ್ಟಿ ಬೆಳೆಸಿದ ಎನ್‌ಸಿಪಿ ಪಕ್ಷದ ಚಿಹ್ನೆಯಾದ ಗಡಿಯಾರ ಹಾಗೂ ಎನ್‌ಸಿಪಿ ಹೆಸರನ್ನು ಕಳೆದುಕೊಂಡಿದ್ದಾರೆ. ಚುನಾವಣಾ ಆಯೋಗ ಅಜಿತ್ ಪವಾರ್ ಬಣವನ್ನು ನಿಜವಾದ ಎನ್ಸಿಪಿ ಎಂದು ಕರೆದಿದೆ. ಎಲ್ಲಾ ಪುರಾವೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
6 ತಿಂಗಳಿಗಿಂತ ಹೆಚ್ಚು ಕಾಲ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ವಿಚಾರದ ವಿವಾದವನ್ನು ಚುನಾವಣಾ ಆಯೋಗ ಇತ್ಯರ್ಥ ಮಾಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರಮುಖ ಕಾನೂನು ತಂಡಗಳ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಹೆಸರು ಮತ್ತು ಚಿಹ್ನೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದೆ. ಇದರೊಂದಿಗೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯೇ ನಿಜವಾದ ಪಕ್ಷ ಎಂದು ಚುನಾವಣಾ ಆಯೋಗ ಪರಿಗಣಿಸಿದಂತಾಗಿದೆ.
ಎನ್‌ಸಿಪಿ ನಾಯಕತ್ವದ ವಿರುದ್ಧ 2023ರ ಜುಲೈನಲ್ಲಿ ಬಂಡಾಯ ಸಾರಿದ್ದ ಶರತ್ ಪವಾರ್ ಸಂಬಂಧಿಯೂ ಆದ ಅಜಿತ್ ಪವಾರ್, ತಮ್ಮ ಬೆಂಬಲಿಗ ಎಂಟು ಶಾಸಕರೊಂದಿಗೆ ಏಕನಾಥ ಶಿಂಧೆ ಬಣ ಶಿವಸೇನಾ ಮತ್ತು ಬಿಜೆಪಿ ಮೈತ್ರಿ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ.