ಪುಣೆ: ಕಾಂಗ್ರೆಸ್ ನಂತಹ ದೊಡ್ಡ ರಾಜಕೀಯ ಪಕ್ಷಕ್ಕೆ ಅಧ್ಯಕ್ಷ ಇಲ್ಲದಿರುವುದರಿಂದ ಸಹಜವಾಗಿಯೇ ಗೊಂದಲ ಸೃಷ್ಟಿಯಾಗುತ್ತದೆ ಎಂದು ಶಿವಸೇನಾ ನಾಯಕ, ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಅಧ್ಯಕ್ಷರ ಅಗತ್ಯವಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮಾತ್ರವಲ್ಲ ಯಾವುದೇ ರಾಜಕೀಯ ಪಕ್ಷಕ್ಕೆ ಅಧ್ಯಕ್ಷ ಇಲ್ಲದೇ ಮುಂದೆ ಸಾಗುವುದು ಜನರಲ್ಲಿ ಅಸಮಾಧಾನದ ಭಾವನೆಯನ್ನು ಉಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿರುವ ಗೊಂದಲವನ್ನು ಶೀಘ್ರದಲ್ಲೇ ಬಗೆಹರಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಮಧ್ಯೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾದ ನಡೆಯನ್ನು ಶಿವಸೇನಾ ಸಂಸದ ರಾವತ್ ತರಾಟೆಗೆ ತೆಗೆದುಕೊಂಡರು. ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಉಲ್ಲೇಖಿಸಿ ಗಡಿ ಭದ್ರತೆಯ ವಿಷಯದ ಬಗ್ಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಜೊತೆ ಚರ್ಚಿಸುವ ಬದಲು ಅಮಿತ್ ಶಾ ಭೇಟಿ ವಿಷಾದನೀಯ ಎಂದು ಹೇಳಿದೆ.