January 20, 2021
ಅಧಿಕಾರಕ್ಕೆ ಬಂದ ಮೊದಲ ಆದೇಶದಲ್ಲೇ ಟ್ರಂಪ್ ರ ‘ಮುಸ್ಲಿಮರ ಪ್ರವಾಸ ನಿಷೇಧ’ ಆದೇಶ ರದ್ದುಗೊಳಿಸಲಿರುವ ಜೋ ಬೈಡನ್

ವಾಷಿಂಗ್ಟನ್ : ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ವೇಳೆ ಅವರು ಮಹತ್ವದ 17 ಆದೇಶಗಳಿಗೆ ಸಹಿ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಟ್ರಂಪ್ ಅವಧಿಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ರಾಷ್ಟ್ರಗಳ ಜನರ ಅಮೆರಿಕ ಭೇಟಿಗೆ ಹೇರಲಾಗಿದ್ದ ನಿಷೇಧವನ್ನು ಬೈಡನ್ ಹಿಂಪಡೆಯಲಿದ್ದಾರೆ ಎನ್ನಲಾಗಿದೆ.
ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸುವ ಟ್ರಂಪ್ ಆದೇಶವನ್ನೂ ಬೈಡನ್ ಹಿಂಪಡೆಯಲಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗಿನ ಒಪ್ಪಂದಗಳನ್ನು ಮರುಸ್ಥಾಪಿಸುವ ಬಗ್ಗೆ ಬೈಡನ್ ಸಹಿ ಮಾಡಲಿದ್ದಾರೆ.
ಕೋವಿಡ್ 19 ಮತ್ತು ಆರ್ಥಿಕ ಪುನಶ್ಚೇತನಕ್ಕೆ ಸಂಬಂಧಿಸಿಯೂ ಮಹತ್ವದ ಆದೇಶಗಳಿಗೆ ಬೈಡನ್ ಸಹಿ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.