ನ್ಯಾಯ ಪಡೆಯುವುದು ನಮ್ಮ ಜನ್ಮ ಸಿದ್ಧ ಹಕ್ಕು : ಭೀಮ್ ಆರ್ಮಿ ಚಂದ್ರಶೇಖರ್ ಆಝಾದ್

Prasthutha|

ಬೆಂಗಳೂರು : ನ್ಯಾಯ ಪಡೆಯುವುದು ನಮ್ಮ ಜನ್ಮ ಸಿದ್ಧಹಕ್ಕು. ಯಾವ ಅಧಿಕಾರದಿಂದ ನಮ್ಮ ಮೇಲೆ ದೌರ್ಜನ್ಯಗಳನ್ನು ಎಸಗಲಾಗುತ್ತಿದೆಯೋ, ಅಂತಹ ಅಧಿಕಾರವನ್ನು ನಾವು ಒಂದಾಗುವ ಮೂಲಕ ಪಡೆಯಬೇಕು ಎಂದು ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಝಾದ್ ಹೇಳಿದ್ದಾರೆ.

- Advertisement -

ನಗರದ ಹೊರವಲಯದ ನೆಲಮಂಗಲದಲ್ಲಿ ಪತ್ರಕರ್ತ, ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಅವರ ಮೇಲಿನ ದಾಳಿ ಯತ್ನ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿಸಿ ಇಂದು ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕದ ಜೊತೆಗೆ ನನಗೆ ತುಂಬಾ ದೊಡ್ಡ ನಂಟಿದೆ. ನಾನು ಜೈಲಿನಲ್ಲಿದ್ದಾಗ ಗೌರಿ ಲಂಕೇಶ್ ಅವರು ನನ್ನನ್ನು ನನ್ನ ಮಗ ಜೈಲಿನಲ್ಲಿದ್ದಾನೆ ಎಂದಿದ್ದರು. ಅವರನ್ನು ಕೊನೆಯ ಬಾರಿ ನೋಡಲು ಸಾಧ್ಯವಾಗದಿರುವುದಕ್ಕೆ ನನಗೆ ತುಂಬಾ ನೋವಿದೆ ಎಂದು ಅವರು ತಿಳಿಸಿದರು.

- Advertisement -

ಆರೆಸ್ಸೆಸ್ ಮತ್ತು ಬಿಜೆಪಿ ಜನರು ಧೈರ್ಯವಂತರಲ್ಲ, ಅವರು ಹೇಡಿಗಳು, ನಾವು ಶಕ್ತಿ ವಂತರು, ಶತಶತಮಾನಗಳಿಂದ ನಮ್ಮ ವಿರುದ್ಧ ನಡೆದಿರುವ ದೌರ್ಜನ್ಯವನ್ನು ಪ್ರತಿಭಟಿಸಿ ಎದುರು ನಿಂತವರು. ಇವರು ನಮ್ಮನ್ನು ನೇರವಾಗಿ ಎದುರಿಸುವುದಿಲ್ಲ, ಷಡ್ಯಂತ್ರಗಳನ್ನು ಮಾಡುತ್ತಾರೆ ಎಂದು ಹೇಳಿದರು.

ಎದುರಿಸಲಾಗದಂತಹ ಸಂದರ್ಭಗಳಲ್ಲಿ ಇವರು ಷಡ್ಯಂತ್ರ ಮಾಡಿ, ಹತ್ಯೆಯನ್ನೂ ಮಾಡುತ್ತಾರೆ. ಸಂವಿಧಾನದಿಂದ ಅವರನ್ನು ಎದುರಿಸಲು ನಾವು ಕಲಿತಿದ್ದೇವೆ. ಇದು ಪ್ರಜಾಪ್ರಭುತ್ವ ದೇಶ. ಇಲ್ಲಿ ಪೊಲೀಸ್ ವ್ಯವಸ್ಥೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಜವಾಬ್ದಾರಿಯಾಗಿದೆ. ಆದರೆ, ಬಿಜೆಪಿಯವರು ಅಪರಾಧಿಗಳನ್ನು ರಕ್ಷಿಸುವ ಕೆಲಸದಿಂದ ಮಾಡುತ್ತಾರೆ ಎಂದು ಹೇಳಿದರು.

ನನ್ನ ಸಹೋದರ ಭಾಸ್ಕರ್ ರನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಆದರೆ, ಅವರು ಹೆದರುವ ಅಗತ್ಯವಿಲ್ಲ, ಯಾಕೆಂದರೆ ಅವರು ನನ್ನ ಸಹೋದರ. ರಾಜ್ಯದಲ್ಲಿ ಇನ್ನು ಮುಂದೆ ಗೌರಿ ಲಂಕೇಶ್, ಕಲಬುರ್ಗಿಯವರಂತಹ ಹತ್ಯೆಯಾಗಬಾರದು. ಸರಕಾರ ಭಾಸ್ಕರ್ ಪ್ರಸಾದ್ ಅವರಿಗೆ ಭದ್ರತೆ ಒದಗಿಸಬೇಕು ತಿಳಿಸಿದರು.

ಪೊಲೀಸರು ನಿಮ್ಮಲ್ಲಿ ಏನು ಕೇಳಿದರು ಎಂದು ನಾನು ಭಾಸ್ಕರ್ ಅವರಲ್ಲಿ ಕೇಳಿದೆ. ನೀವು ಏನು ಕೇಳಿದರು ಕೇಳಿದೆ. ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ನಿನ್ನಲ್ಲಿ ಪಿಸ್ತೂಲ್ ಇದೆ, ನಿನ್ನನ್ನು ರಕ್ಷಿಸಿಕೊಳ್ಳು ಎಂದಿದ್ದಾರೆ ಎಂದರು. ಆದರೆ, ಈ ಪೊಲೀಸರಿಗೆ ನಮ್ಮ ಇತಿಹಾಸ ಗೊತ್ತಿಲ್ಲ. ನಾವು ಬಾಬಾ ಸಾಹೇಬರ ಕಾನೂನು ಪ್ರಕಾರ ಹೋರಾಡಿದ್ದೇವೆ. ಆದರೆ, ನಮಗೆ ಕೋರೆಗಾಂವ್ ಇತಿಹಾಸವೂ ಇದೆ ಎಂದು ಚಂದ್ರಶೇಖರ್ ಆಝಾದ್ ತಿಳಿಸಿದರು.

ನ್ಯಾಯ ಪಡೆಯುವುದು ನಮ್ಮ ಜನ್ಮ ಸಿದ್ಧಹಕ್ಕು. ಈಗ ನಾವು ಯೂಟ್ಯೂಬ್ ಚಾನೆಲ್ ಮಾಡಿದ್ದೇವೆ. ಮುಂದೆ ನಾವು ಮುಖ್ಯವಾಹಿನಿ ವಾಹಿನಿ ಕೂಡ ಮಾಡುತ್ತೇವೆ.

ಯಾವ ಅಧಿಕಾರದಿಂದ ಇವರು ನಮ್ಮ ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಯೋ, ಅವರ ಅಧಿಕಾರವನ್ನು ನಾವೆಲ್ಲಾ ಒಂದುಗೂಡಿ ಪಡೆಯಬೇಕು. ಆಗ ಗೌರಿ ಲಂಕೇಶ್ ರಂತಹವರ ಕೊಲೆಯಾಗುವುದಿಲ್ಲ ಎಂದು ಅವರು ತಿಳಿಸಿದರು.

ನಮ್ಮ ಮಕ್ಕಳ ಭವಿಷ್ಯ ಒಳ್ಳೆಯದಾಗಬೇಕಾದರೆ, ನಮ್ಮ ಸಂವಿಧಾನದ ಮೌಲ್ಯಗಳು ಉಳಿಯಬೇಕಾದರೆ, ನಾವೆಲ್ಲಾ ಒಂದುಗೂಡಬೇಕು. ಆ ಮೂಲಕ ಇವರನ್ನು ಅಧಿಕಾರದಿಂದ ಕಿತ್ತೆಸೆಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಭಾಸ್ಕರ್ ಪ್ರಸಾದ್ ಅವರಿಗೆ ನ್ಯಾಯ ಕೊಡಿಸುವುದು ಸರಕಾರದ ಜವಾಬ್ದಾರಿ. ಅವರಿಗೆ ರಕ್ಷಣೆ ಕೊಡುವುದು ಪೊಲೀಸರ ಜವಾಬ್ದಾರಿ. ಯಾವ ಸರಕಾರ ನಮ್ಮ ಜನರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲವೋ, ಅವರು ಆಡಳಿತದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ತಿಳಿಸಿದರು.  

ಇದೇ ವೇಳೆ ಮಾತನಾಡಿದ ಭಾರತೀಯ ಪರಿವರ್ತನಾ ಸಭಾದ ಮುಖಂಡ, ನ್ಯಾಯವಾದಿ ಹರಿರಾಮ್ ಅವರು ಮಾತನಾಡಿ, ಮುಖ್ಯವಾಹಿನಿ ಮಾಧ್ಯಮಗಳು ಮಾರಾಟವಾಗಿರುವುದಕ್ಕೆ ಇಂದು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಜನ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಅಂತಹವರಲ್ಲಿ ಭಾಸ್ಕರ್ ಪ್ರಸಾದ್ ಕೂಡ ಒಬ್ಬರು. ಅಂತಹವರನ್ನು ರಕ್ಷಿಸುವ ಬದಲು, ಅವರಿಗೆ ಬೆದರಿಕೆಯೊಡ್ಡುವ ಕೆಲಸಗಳಾಗಿವೆ ಎಂದು ತಿಳಿಸಿದರು.

ಪೊಲೀಸರ ಮೇಲೆ ಜನ ನಂಬಿಕೆಯಿಟ್ಟಿದ್ದಾರೆ. ಪೊಲೀಸರಲ್ಲೂ ಜನರ ಅಗತ್ಯಕ್ಕೆ ಸೇವೆ ಮಾಡುವ ಅಧಿಕಾರಿಗಳಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ಅಪರಾಧಿಗಳ ಪರವಾಗಿ ನಿಂತಿದ್ದಾರೆ. ಯಾರೊ ಒಂದಿಬ್ಬರು ಮಾಡುವ ಕೃತ್ಯಗಳು ಇಡೀ ಇಲಾಖೆಗೆ ಕೆಟ್ಟ ಹೆಸರು ತರುತ್ತಿದೆ ಎಂದು ಹೇಳಿದರು.

ಇದು ಸಾಂಕೇತಿಕ ಪ್ರತಿಭಟನೆ, ನ್ಯಾಯ ಸಿಗದಿದ್ದರೆ ಬೆಂಗಳೂರು ನಗರದಲ್ಲಿ ಬೃಹತ್ ಹೋರಾಟ ಸಂಘಟಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಎಸ್ ಡಿಪಿಐ ಅಫ್ಝರ್ ಕೂಡ್ಲಿಪೇಟೆ, ಹೊಡಿಬಡಿ ಸಂಸ್ಕೃತಿ ನಮ್ಮದಲ್ಲ, ಆ ಸಂಸ್ಕೃತಿ ನಮ್ಮಲ್ಲಿಲ್ಲದೆ ಇರುವುದರಿಂದ ಇವತ್ತು ನಾವು ಸಂವಿಧಾನಬದ್ಧವಾಗಿ ಇವತ್ತು ಇಲ್ಲಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಭಾಸ್ಕರ್ ಪ್ರಸಾದ್ ಅವರು ಅಂಬೇಡ್ಕರ್ ಆಶಯಗಳನ್ನು ದೃಢಪಡಿಸುತ್ತಿರುವುದರಿಂದ, ಸೋಶಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ಇವತ್ತು ಈ ಹೋರಾಟದಲ್ಲಿ ಭಾಗವಹಿಸಿದೆ. ಭಾಸ್ಕರ್ ಪ್ರಸಾದ್ ಫ್ಯಾಶಿಸ್ಟರ ವಿರುದ್ಧ ಮಾತನಾಡಿದ್ದಾರೆ. ಈ ವಿಷಯ ನಿಮಗೆ ಪಥ್ಯವಾಗದಿದ್ದರೆ, ನೀವು ವೈಚಾರಿಕವಾಗಿ ಅವರನ್ನು ಎದುರಿಸಿ. ಎಸ್ ಡಿಪಿಐ ಭಾಸ್ಕರ್ ಪ್ರಸಾದ್ ಅವರ ನ್ಯಾಯಯುತ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದರು.

ಪಿಎಫ್ ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಅವರು ಮಾತನಾಡಿ, ಭಾಸ್ಕರ್ ಪ್ರಸಾದ್ ತಮ್ಮ ನಾಲಗೆಯ ಮೂಲಕ ಫ್ಯಾಶಿಸ್ಟರ ವಿರುದ್ಧ ಹೋರಾಟ ಮಾಡಿದ್ದಾರೆ. ನಮ್ಮ ದೇಶದಲ್ಲಿ ವಿಭಿನ್ನ ಸಂಸ್ಕೃತಿಯಿದೆ. ಹೀಗಾಗಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಹೀಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಭಾಸ್ಕರ್ ಪ್ರಸಾದ್ ವಿರುದ್ಧ ದಾಳಿ ಯತ್ನ ನಡೆಸಿದೆ ಎಂದು ಹೇಳಿದರು.

ಭಾಸ್ಕರ್ ಪ್ರಸಾದ್ ಅವರೊಂದಿಗೆ ಕೈಜೋಡಿಸಬೇಕು. ಭಾಸ್ಕರ್ ಪ್ರಸಾದ್ ಮೇಲೆ ಗುಂಡು ಹಾರುವುದಾದರೆ, ಅವರ ಮುಂದೆ ನಿಂತು ಲಕ್ಷಾಂತರ ಭಾಸ್ಕರ್ ಪ್ರಸಾದ್ ಗಳಾಗಿ ನಾವು ನಿಲ್ಲಬೇಕು. ಮುಂದೆ ಇದು ದೊಡ್ಡ ಹೋರಾಟವಾಗಲು ಅವಕಾಶ ನೀಡದೆ ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ನ್ಯಾಯವಾದಿ ಜಗದೀಶ್ ಮಾತನಾಡಿ, ನಮಗೆ ಮಸಿ ಬಳಿಯುವುದರಲ್ಲಿ ವಿಶ್ವಾಸವಿಲ್ಲ, ನಾವು ಕಾನೂನು ಹೋರಾಟ ಮಾಡುತ್ತೇವೆ ಮತ್ತು ಭಾಸ್ಕರ್ ಪ್ರಸಾದ್ ಅವರಿಗೆ ನ್ಯಾಯವಾದಿಗಳ ತಂಡದ ಮೂಲಕ ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಪ್ರಗತಿಪರ ಚಿಂತಕ ಯೋಗೀಶ್ ಮಾಸ್ಟರ್, ಸಾಮಾಜಿಕ ಕಾರ್ಯಕರ್ತೆ ನಝ್ಮಾ ಚಿಕ್ಕನೇರಳೆ, ನೋಂದಾಯಿತ ಆರೆಸ್ಸೆಸ್ ಮುಖಂಡ ಹನುಮೇಗೌಡ ಮತ್ತಿತರ ಪ್ರಮುಖರು ಈ ವೇಳೆ ಮಾತನಾಡಿದರು.    



Join Whatsapp