ಬೆಂಗಳೂರು : ಪತ್ರಕರ್ತ, ದಲಿತ ಹೋರಾಟಗಾರ ಭಾಸ್ಕರ್ ಪ್ರಸಾದ್ ಮತ್ತು ಅವರ ನ್ಯೂಸ್14 ಕಚೇರಿ ಮೇಲೆ ನಡೆದ ದಾಳಿ ಯತ್ನ ವಿರೋಧಿಸಿ ಇಂದು ನಗರದ ಹೊರವಲಯ ನೆಲಮಂಗಲದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ತಮ್ಮ ಸುದ್ದಿ ವಾಹಿನಿಯಲ್ಲಿ ಸಂಘ ಪರಿವಾರದ ನಡೆಗಳನ್ನು ಖಂಡಿಸುವ ಭಾಸ್ಕರ್ ಪ್ರಸಾದ್ ಅವರ ‘ನ್ಯೂಸ್14’ ಕಚೇರಿ ಮೇಲೆ ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ದಾಳಿ ನಡೆಸಲು ಯತ್ನಿಸಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಪ್ರತಿಭಟನೆಗೆ ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಝಾದ್ ರಾವಣ್ ಆಗಮಿಸಿದ್ದಾರೆ. ಬೃಹತ್ ಸಂಖ್ಯೆಯ ಪ್ರತಿಭಟನಕಾರರು ನೆಲಮಂಗಲದ ಮುಖ್ಯರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ.
ಭಾಸ್ಕರ್ ಪ್ರಸಾದ್ ಅವರ ಮೇಲೆ ಸಂಘ ಪರಿವಾರ ಪ್ರೇರಿತ ಶಕ್ತಿಗಳು ಕೆಲವು ದಿನಗಳ ಹಿಂದೆ ದಾಳಿಗೆ ಯತ್ನಿಸಿವೆ ಎಂಬ ಆರೋಪಗಳು ಕೇಳಿಬಂದಿವೆ. ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು ದೊಡ್ಡಮಟ್ಟದ ಆಕ್ರೋಶ ಹೊರಬಿದ್ದಿದೆ.
ಭೀಮ್ ಆರ್ಮಿ, ಎಸ್ ಡಿಪಿಐ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.