ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

Prasthutha|

ಶಿವಮೊಗ್ಗ: ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಸೃಷ್ಟಿಸಿದೆ. ನಮ್ಮ ರಾಜ್ಯದಲ್ಲಿನ ಯಾತ್ರೆ ಇತರರಿಗೆ ಮಾದರಿಯಾಗಿದ್ದು, ತೆಲಂಗಾಣದಲ್ಲೂ ನಮ್ಮದೇ ಮಾದರಿಯಲ್ಲಿ ಮುಂದುವರಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

- Advertisement -

ಇಂದು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಇದನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಭಾನುವಾರ ಪಕ್ಷದ ನಾಯಕರೆಲ್ಲರೂ ಸೇರಿ ಚರ್ಚೆ ಮಾಡುತ್ತೇವೆ. ಇದು ಕೇವಲ 21 ಕ್ಷೇತ್ರಗಳಲ್ಲಿ ಮಾತ್ರವಲ್ಲ, ಎಲ್ಲ 224 ಕ್ಷೇತ್ರಗಳಲ್ಲೂ ಪ್ರಭಾವ ಬೀರಬೇಕು ಎಂದು ತಿಳಿಸಿದರು.

ಸಚಿವ ಎಂಟಿಬಿ ನಾಗರಾಜ್ ಅವರ ಆಡಿಯೋ ಲೀಕ್ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಸರ್ಕಾರ ಹುಟ್ಟಿರುವುದೇ ಆಪರೇಷನ್ ಕಮಲ ಎಂಬ ಭ್ರಷ್ಟಾಚಾರದಲ್ಲಿ. ಇದರಲ್ಲಿ ಎಂಟಿಬಿ ನಾಗರಾಜ್ ಅವರು ಕೂಡ ಸೇರಿದ್ದಾರೆ. ನಿನ್ನೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಮುಂದಾದಾಗ ಕೋಟಿ, ಕೋಟಿ ಹಣ ಸಿಕ್ಕಿದೆ. ರಾಜ್ಯದಲ್ಲೂ ಇದೇ ಮಾದರಿಯಲ್ಲಿ ನಡೆದಿದೆ ಎಂದು ಹಿಂದೆ ಶಾಸಕ ಶ್ರೀನಿವಾಸ ಗೌಡರು ವಿಧಾನ ಸಭೆಯಲ್ಲಿ ತಿಳಿಸಿದರು. ಆದರೆ ಸರ್ಕಾರ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿತು. ದೆಹಲಿ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

ಆಪರೇಷನ್ ಕಮಲದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು. ಆ ಮೂಲಕ ಈ ಅಕ್ರಮ ಕೊನೆಗೊಂಡು ಪ್ರಜಾಪ್ರಭುತ್ವ ಉಳಿಯಬೇಕಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಈ ವಿಚಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು. ಈ ಪ್ರಕರಣಗಳಿಗೆ ಪಿಎಂಎಲ್ಎ ಹಾಗೂ ಹಣಕಾಸು ಅವ್ಯವಹಾರ ಅನ್ವಯವಾಗುವುದಿಲ್ಲವೇ? ಹೀಗಾಗಿ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸತ್ಯಾಸತ್ಯತೆಯನ್ನು ಬೆಳಕಿಗೆ ತರಬೇಕು’ ಎಂದು ತಿಳಿಸಿದರು

ನ. 6 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಭೇಟಿ ನೀಡಲಿರುವ ಬಗ್ಗೆ ಕೇಳಿದಾಗ, ‘ರಾಷ್ಟ್ರೀಯ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನ.6ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ನಾಳೆ ನಾನು ಪೂರ್ವಭಾವಿ ಸಭೆ ಕರೆಯುತ್ತಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಈ ಉನ್ನತ ಹುದ್ದೆಗೆ ಆಯ್ಕೆಯಾಗಿರುವುದರಿಂದ ನಮ್ಮ ರಾಜ್ಯಕ್ಕೆ ಒಂದು ದೊಡ್ಡ ಶಕ್ತಿ ಬಂದಿದೆ. 50 ವರ್ಷಗಳ ನಂತರ ರಾಜ್ಯದವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಹಿರಿಯರು, ಪ್ರಾಮಾಣಿಕ ನಾಯಕರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದರು.

ನ.6ರಂದು ರಾಜ್ಯದ ಎಲ್ಲ ಕಾರ್ಯಕರ್ತರು ಬಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಕೋರಬಹುದು. ಈ ಕಾರ್ಯಕ್ರಮವನ್ನು ಎಲ್ಲಿ, ಹೇಗೆ ಮಾಡಲಾಗುವುದು ಎಂಬ ಬಗ್ಗೆ ನಾಳೆ ಚರ್ಚೆ ನಂತರ ನಿಗದಿ ಮಾಡುತ್ತೇವೆ. ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಂಚಾಯ್ತಿ ಸದಸ್ಯರು, ಮುಖಂಡರು, ಜಿಲ್ಲಾ ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ಸೆಲ್ ಮುಖ್ಯಸ್ಥರು ಈ ಕಾರ್ಯಕ್ರಮಕ್ಕೆ ಆಗಮಿಸಲು ತಯಾರಿ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಬಿರುಕಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮನೆಯಲ್ಲೇ ಹನ್ನೆರಡು ಬಾಗಿಲುಗಳಾಗಿವೆ. ಅವರದು ಬಿಜೆಪಿ, ಕಾಂಗ್ರೆಸ್ ಹಾಗೂ ದಳದ ಸಮ್ಮಿಶ್ರ ಸರ್ಕಾರವಾಗಿದೆ. ಅವರಲ್ಲಿ ಏನೆಲ್ಲ ನೋವಿದೆ ಎಂಬುದರ ಬಗ್ಗೆ ಈಶ್ವರಪ್ಪ ಅವರನ್ನೇ ಕೇಳಿ’ ಎಂದರು.

ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ‘ಮುಂದಿನ ನಾಲ್ಕೈದು ದಿನಗಳಲ್ಲಿ ಈ ವಿಚಾರದಲ್ಲಿ ನಮ್ಮ ತಯಾರಿ ಬಗ್ಗೆ ಮಾಹಿತಿ ನೀಡುತ್ತೇನೆ’ ಎಂದು ತಿಳಿಸಿದರು.

ಅವಧಿಗೂ ಮುನ್ನ ಚುನಾವಣೆ ಬರುತ್ತದೆಯೇ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಏನನ್ನೂ ಹೇಳುವುದಿಲ್ಲ. ಇದು ಸರ್ಕಾರಕ್ಕೆ ಬಿಟ್ಟ ವಿಚಾರ. ನಾವಂತು ಚುನಾವಣೆಗೆ ಸನ್ನದ್ಧರಾಗಿದ್ದೇವೆ’ ಎಂದರು.

ಶಿವಮೊಗ್ಗ ಜಿಲ್ಲೆ ಕಾಂಗ್ರೆಸ್ ಪಕ್ಷ ಸಂಘಟನೆ ಬಗ್ಗೆ ಕೇಳಿದಾಗ, ‘ಶಿವಮೊಗ್ಗದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. 1999ರಲ್ಲಿ ಯಾವ ರೀತಿ ಬದಲಾವಣೆ ಆಯಿತೊ, ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆದಾಗ ಹೇಗೆ ಬಿಜೆಪಿಯ ದೊಡ್ಡ ನಾಯಕರು ಸೋಲನ್ನನುಭವಿಸಿದ್ದರೋ ಅಂತಹುದೇ ವಾತಾವರಣ ಈಗ ನಿರ್ಮಾಣವಾಗಿದೆ. ಮುಂದಿನ ತಿಂಗಳು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ಯಡಿಯೂರಪ್ಪನವರು ಹಾಗೂ ಈಶ್ವರಪ್ಪನವರು ಉದ್ದಿಮೆದಾರರನ್ನು ಕರೆತಂದು ಶಿವಮೊಗ್ಗದಲ್ಲಿ ಬಂಡವಾಳ ಹೂಡುವಂತೆ ಮಾಡಲಿ. ಇಲ್ಲಿನ ಜನರಿಗೆ ಉದ್ಯೋಗ ಕೊಡಿಸಲಿ ಎಂದು ಅವರು ಸವಾಲೆಸೆದರು.

ಇವರು ನಿರ್ಮಾಣ ಮಾಡಿರುವ ವಾತಾವರಣ ಇಡೀ ಶಿವಮೊಗ್ಗ ಜಿಲ್ಲೆಗೆ ಕಪ್ಪು ಚುಕ್ಕೆ ತಂದಿದೆ. ಯಾರಾದರೂ ಉದ್ದಿಮೆದಾರಿಗೆ ಇಲ್ಲಿ ಉತ್ತಮ ವಾತಾವರಣ ಇದೆ, ಇಲ್ಲಿಗೆ ಬಂದು ಉದ್ದಿಮೆ ಆರಂಭಿಸಿ ಎಂದು ಆಹ್ವಾನಿಸಿ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿಸಲಿ. ಯಾರ್ಯಾರು ಇಲ್ಲಿ ಬಂಡವಾಳ ಹೂಡಿಕೆ ಮಾಡುತ್ತಾರೋ ನೋಡೋಣ. ಈ ವಿಚಾರವನ್ನು ಶಿವಮೊಗ್ಗದ ನಾಗರೀಕರು ಅರಿತುಕೊಳ್ಳಬೇಕು. ಈ ಭಾಗದ ರೈತರಿಗೆ ಅರಣ್ಯ ಕಾಯ್ದೆ, ಶರಾವತಿ ನೀರು, ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ರೈತರ ಸಮಸ್ಯೆ, ಅಡಿಕೆ ಬೆಳೆ ಸಮಸ್ಯೆ ಹೆಚ್ಚಾಗಿದ್ದು, ಇವರಿಗೆ ರಕ್ಷಣೆ ಇಲ್ಲವಾಗಿದೆ. ಈ ವಿಚಾರವಾಗಿ ಸ್ಥಳೀಯ ನಾಯಕರಾದ ರಮೇಶ್ ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಅವರು ಒಂದು ತಿಂಗಳಲ್ಲಿ ವರದಿ ನೀಡಲಿದ್ದು, ಈ ಭಾಗದ ರೈತರ ಹಿತ ಕಾಯಲು ಯಾವ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

Join Whatsapp