ಡಿ.8ರ ಭಾರತ್ ಬಂದ್ ಗೆ ವಿರೋಧ ಪಕ್ಷಗಳ ಬೆಂಬಲ

Prasthutha|

ಹೊಸದಿಲ್ಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಕಳೆದೆರಡು ವಾರದಿಂದ ದಿಲ್ಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರು ಡಿಸೆಂಬರ್ 8ಕ್ಕೆ ನೀಡಿದ ‘ಭಾರತ್ ಬಂದ್’ ಕರೆಯನ್ನು ಹಲವು ವಿರೋಧ ಪಕ್ಷಗಳು ಬೆಂಬಲಿಸಿವೆ.

- Advertisement -

ಕೃಷಿ ಮಸೂದೆಯನ್ನು ಹಿಂದೆಗೆಯಬೇಕೆಂಬ ಪ್ರಮುಖ ಬೇಡಿಕೆಯನ್ನು ತಿರಸ್ಕರಿಸಿದ ಕಾರಣಕ್ಕೆ ಕೇಂದ್ರ ಸರಕಾರದೊಂದಿಗಿನ ಪ್ರತಿಭಟನಾ ನಿರತ ರೈತರ ಐದನೆ ಸುತ್ತಿನ ಮಾತುಕತೆ ಶನಿವಾರ ಮುರಿದುಬಿದ್ದಿದೆ. ಆ ನಂತರ ಮಾತನಾಡಿದ ಅಖಿಲ ಭಾರತ ಕಿಸಾನ್ ಫೆಡರೇಶನ್ ನ ಅಧ್ಯಕ್ಷ ಪ್ರೇಮ್ ಸಿಂಗ್ ಬಂಘು “ಡಿಸೆಂಬರ್ 8ರಂದು ನಡೆಯಲಿರುವ ಭಾರತ್ ಬಂದ್ ಮಹತ್ವಪೂರ್ಣದ್ದು” ಎಂದಿದ್ದಾರೆ.

ಭಾರತ್ ಬಂದ್ ಪ್ರಯುಕ್ತ ರೈತರು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯಲಿದ್ದಾರೆ, ಟೋಲ್ ಪ್ಲಾಜಾಗಳನ್ನು ವಶಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ಹರ್ವಿಂದರ್ ಸಿಂಗ್ ಲಖ್ವಾಲ್ ಹೇಳಿರುವುದಾಗಿ ಪಿ.ಟಿ.ಐ ಉಲ್ಲೇಖಿಸಿದೆ.

- Advertisement -

ಕಾಂಗ್ರೆಸ್, ಪಶ್ಚಿಮ ಬಂಗಾಳದ ಆಡಳಿತ ರೂಢ ತೃಣಮೂಲ ಪಕ್ಷ, ಆರ್.ಜೆ.ಡಿ, ಸಮಾಜವಾದಿ ಪಕ್ಷ, ತಮಿಳುನಾಡು ಆಡಳಿತರೂಢ ಡಿ.ಎಂ.ಕೆ, ತೆಲಂಗಾಣದ ಟಿ.ಆರ್.ಎಸ್ ಮತ್ತು ಇತರ ಹಲವು ಎಡಪಂಥೀಯ ಗುಂಪುಗಳು ರೈತರ ಬಂದ್ ಕರೆಯನ್ನು ಬೆಂಬಲಿಸಿವೆ.

ನಗರದ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತರಿಗೆ ತುರ್ತು ಮೂಲಸೌಕರ್ಯಗಳನ್ನು ಒದಗಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತನ್ನ  ಪಕ್ಷ ಬಂದನ್ನು ಸಂಪೂರ್ಣ ಬೆಂಬಲಿಸಲಿದೆ ಎಂದು ಇಂದು ಬೆಳಗ್ಗೆ ಹೇಳಿದ್ದಾರೆ.

Join Whatsapp