ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು: ಅರವಿಂದ್ ಕೇಜ್ರಿವಾಲ್’ರನ್ನು ಭೇಟಿಯಾಗಲಿರುವ ಭಗವಂತ್ ಮಾನ್ನ್

Prasthutha|

ಚಂಡೀಗಢ: ಪಂಚರಾಜ್ಯ ಚುನಾವಣೆಯ ಪೈಕಿ ಪಂಜಾಬ್’ನಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿ ಆಮ್ ಆದ್ಮಿ ಪಕ್ಷವು ಭರ್ಜರಿಯಾಗಿ ವಿಜಯಗಳಿಸಿ ಅಚ್ಚರಿ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟ ಭಗವಂತ್ ಮಾನ್ನ್ ಅವರು ದೆಹಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲಿದ್ದಾರೆ.

- Advertisement -

ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್, ಶಿರೋಮಣಿ ಅಕಾಳಿದಳ – ಬಿಎಸ್ಪಿ ಮೈತ್ರಿಕೂಟವನ್ನು ಸೋಲಿಸಿ ಆಮ್ ಆದ್ಮಿ ಪಕ್ಷ ಪ್ರಚಂಡ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಈ ಹಿನ್ನೆಲೆಯಲ್ಲಿ ಉಭಯ ನಾಯಕರ ಭೇಟಿ ಸಾಕಷ್ಟು ಮಹತ್ವ ಪಡೆದಿದೆ.

ದೆಹಲಿ ಪ್ರಯಾಣಕ್ಕೆ ಮೊದಲು ಸಂಗ್ರೂರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಗವಂತ್ ಮಾನ್ನ್ ಅವರು ಪಂಜಾಬ್’ನಲ್ಲಿ ಸರ್ಕಾರ ರಚಿಸುವ ಸಂಬಂಧ ಕೇಜ್ರಿವಾಲ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಲಿದ್ದೇನೆ ಮತ್ತು ಪಂಜಾಬ್’ನಲ್ಲಿ ಪಕ್ಷದ ಅಭೂತಪೂರ್ವ ವಿಜಯಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

- Advertisement -

ಸರ್ಕಾರ ರಚಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಶನಿವಾರ ಪಂಜಾಬ್ ರಾಜ್ಯಪಾಲರನ್ನು ಭೇಟಿ ನಡೆಸಿ ಸರ್ಕಾರ ರಚಿಸಲು ಹಕ್ಕು ಮಂಡಿಸುವುದಾಗಿ ತಿಳಿಸಿದ್ದಾರೆ.
ನವನ್ ಶಹರ್ ಜಿಲ್ಲೆಯ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ವಗ್ರಾಮ ಖಟ್ಕರ್ ಕಲಾನ್ ಎಂಬಲ್ಲಿ ನೂತನ ಸರ್ಕಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮಾನ್ನ್ ತಿಳಿಸಿದ್ದಾರೆ.

ಪಕ್ಷದ ಅಭೂತಪೂರ್ವ ವಿಜಯದ ಕುರಿತು ಪ್ರತಿಕ್ರಿಯಿಸಿದ ಅವರು ದುರಂಹಕಾರ ರಾಜಕಾರಣಿಗಳಿಗೆ ನಿರೀಕ್ಷೆಯಂತೆ ಜನತೆ ಸೋಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಭಗವಂತ್ ಮಾನ್ನ್ ಅವರು ಧುರಿ ಕ್ಷೇತ್ರದಿಂದ 58,206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಒಟ್ಟು 117 ವಿಧಾನಸಭಾ ಸ್ಥಾನಗಳ ಪೈಕಿ 92ರಲ್ಲಿ ಎಎಪಿ ಪಕ್ಷ ಅಭೂತಪೂರ್ವವಾಗಿ ವಿಜಯಿಯಾಗಿದ್ದು, ಹಾಲಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ, ಪ್ರಕಾಶ್ ಸಿಂಗ್ ಬಾದಲ್ ಮತ್ತು ಅಮರೀಂದರ್ ಸಿಂಗ್ ಸೇರಿದಂತೆ ಹಲವು ರಾಜಕೀಯ ದಿಗ್ಗಜರು ಎಎಪಿ ಅಭ್ಯರ್ಥಿಗಳ ಎದುರು ಸೋಲನುಭವಿಸಿದ್ದಾರೆ.

Join Whatsapp