ಪತ್ರಕರ್ತ ಸಂಶುದ್ದೀನ್ ಎಣ್ಮೂರ್ ಅವರಿಗೆ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ ಪ್ರದಾನ

Prasthutha|

ಬಂಟ್ವಾಳ:  ಪತ್ರಕರ್ತ ಸಂಶುದ್ದೀನ್ ಎಣ್ಮೂರು ಅವರಿಗೆ   ವೆಬ್ ಸೈಟ್ ನಲ್ಲಿ ಪ್ರಕಟವಾದ ರಾಜ್ಯ ಮಟ್ಟದ ಅತ್ಯುತ್ತಮ ವರದಿಗೆ ನೀಡುವ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ – 2022 ಅನ್ನು ರವಿವಾರ ನೀಡಿ ಗೌರವಿಸಲಾಯಿತು

- Advertisement -

ನಿರತ ಸಾಹಿತ್ಯ ಸಂಪದ ಕಡೆಗೋಳಿ ತುಂಬೆ ಹಾಗೂ ಗಲ್ಫ್ ಕನ್ನಡಿಗ ಡಾಟ್ ಕಾಮ್ ಇದರ ಜಂಟಿ ಆಶ್ರಯದಲ್ಲಿ  ಬಿ ಸಿ ರೋಡ್ ನ ಕೈಕುಂಜೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತುವಿನ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪತ್ರಕರ್ತ ಸಂಶುದ್ದೀನ್ ಎಣ್ಮೂರು ಅವರು ವಾರ್ತಾಭಾರತಿ ವೆಬ್ ಸೈಟ್ ನಲ್ಲಿ ಮಾಡಿದ  “ಕೊರಗುತ್ತಿರುವ ಕೊರಗರ ಬದುಕು” ವಿಶೇಷ ವರದಿಗೆ ಗಲ್ಫ್ ಕನ್ನಡಿಗ. ಕಾಮ್ ಸ್ಥಾಪಕ ಬಿ ಜಿ ಮೋಹನ್ ದಾಸ್ ಹೆಸರಿನಲ್ಲಿ ನೀಡಲಾಗುವ ಬಿ ಜಿ ಮೋಹನ್ ದಾಸ್ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿತ್ತು.

- Advertisement -

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಶುದ್ದೀನ್ ಎಣ್ಮೂರ್ ಅವರು ರಾಷ್ಟ್ರದ ಮೂಲ ನಿವಾಸಿಗಳಾದ ಕೊರಗ ಸಮುದಾಯವು ಸ್ವಾಭಿಮಾನದಂತೆ ಬದುಕಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಇಂದಿಗೂ ಸಂಕಷ್ಟ ಪಡುತ್ತಿದೆ. ಮೂಡನಂಬಿಕೆ, ಅಂಧಶ್ರದ್ಧೆ, ಅಸ್ಪೃಶ್ಯತೆಗೆ ಒಳಗಾಗಿ ಮೂಲಭೂತ ಸೌಕರ್ಯ, ಮಾನವ ಹಕ್ಕುಗಳಿಂದ ಕೊರಗ ಸಮುದಾಯ ವಂಚಿತವಾಗಿದೆ. ಪೌಷ್ಟಿಕಾಂಶದ ಕೊರತೆಯಿಂದ ಇಡೀ ಸಮುದಾಯ ಅಳಿವಿನ ಅಂಚಿನಲ್ಲಿದೆ. ಈ ಬಗ್ಗೆ ಸರಕಾರದ ಕಣ್ಣು ತೆರೆಸುವ ಉದ್ದೇಶದಿಂದ  ಮಾಡಿರುವ  ವರದಿಗೆ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ ಎಂದರು.

ಬಿ.ಜಿ.ಮೋಹನ್ ದಾಸ್ ಅವರ ಸಹೋದರ, ಉಡುಪಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಜಂಟಿ ಕಾರ್ಯದರ್ಶಿ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರ್ ಮಾತನಾಡಿ, ಸಮಾಜದಲ್ಲಿ ಕಡೆಗಣಿಸಲ್ಪಟ್ಟ, ಸಮಾಜದಿಂದ ಸಂಕಷ್ಟದಲ್ಲಿ ಇರುವ, ಮುಖ್ಯವಾಹಿನಿಯಿಂದ ದೂರ ಉಳಿದವರ ಬಗ್ಗೆ ಬಿ.ಜಿ ಮೋಹನ್ ದಾಸ್ ಅವರು ಅಪಾರ ಕಾಳಜಿ ವಹಿಸುತ್ತಿದ್ದರು. ಅವರ ಹೆಸರಿನಲ್ಲಿ ಪ್ರದಾನಿಸುವ ಪ್ರಶಸ್ತಿ ಕೊರಗರ ಬಗೆಗಿನ ಆಯ್ಕೆಯಾಗಿರುವುದು ಅವರಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.

ನಿರತ ಸಾಹಿತ್ಯ ಸಂಪದ ಅಧ್ಯಕ್ಷ ಬ್ರಿಜೇಶ್ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸುಕೇಶ್ ಕುಮಾರ್ ಶೆಟ್ಟಿ ಬಿ.ಜಿ.ಮೋಹನ್ ದಾಸ್ ಅವರ ಪರಿಚಯ ಭಾಷಣ ಮಾಡಿದರು. ಉಪನ್ಯಾಸಕ ಅಬ್ದುಲ್ ಮಜೀದ್ ಅವರು ಪ್ರಶಸ್ತಿ ಪುರಸ್ಕೃತ ಸಂಶುದ್ದೀನ್ ಅವರ ಪರಿಚಯ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಉಪಸ್ಥಿತರಿದ್ದರು.  ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾದ ಪತ್ರಿಕೋದ್ಯಮ ಉಪನ್ಯಾಸಕ ಗುರುಪ್ರಸಾದ್ ಅವರು ಪ್ರಶಸ್ತಿ ಗೆ ಪಾಲ್ಗೊಂಡ ವರದಿಗಳ ಬಗ್ಗೆ ವಿಶ್ಲೇಷಿದರು.

.

ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ಮೊದಲು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಬಿ.ಎಂ.ತುಂಬೆ ಉದ್ಘಾಟಿಸಿದರು. ರಾಯಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ  ಡಾ | ಮೈತ್ರಿ ಭಟ್,  ಮಹೇಂದ್ರನಾಥ್ ಸಾಲೆತ್ತೂರು , ತುಳಸಿ ಕೈರಂಗಳ್ , ಸುಹಾನ ಸೈಯ್ಯದ್ , ದೀಪ್ತಿ ಪಿ,  ಫಾತಿಮಾ ಪರ್ವೀನ್, ಶಶಿಕಲಾ ಭಾಸ್ಕರ್,  ನಳಿನಿ ಬಿ ರೈ ಮಂಚಿ,ವಿಶ್ವನಾಥ್ ಕುಲಾಲ್ ಮಿತ್ತೂರು , ಆಶೋಕ್ ಎನ್ ಕಡೇಶ್ವಾಲ್ಯ ,ಖತೀಜತುಲ್ ನಝೀಲ,  ಸಂಧ್ಯಾ ಕುಮಾರಿ ಎಸ್ , ಮಹಿಮಾ ಆರ್ ಕೆ, ನಂದಿತಾ ವಿಟ್ಲ ಕವನವಾಚನ ಮಾಡಿದರು.

ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯ ಸಹಶಿಕ್ಷಕಿ ಸುಧಾ ನಾಗೇಶ್ ಸ್ವಾಗತಿಸಿದರು. ಕರುಣಾಕರ ಮಾರಿಪಳ್ಳ ಧನ್ಯವಾದಗೈದರು. ಬಿ.ಎಂ.ರಫೀಕ್ ಕಾರ್ಯಕ್ರಮ ನಿರೂಪಿಸಿದರು.



Join Whatsapp