ಏಷ್ಯಾ ಕಪ್‌| ಕೊಹ್ಲಿ ಅರ್ಧಶತಕದ ಮಿಂಚು, ಪಾಕಿಸ್ತಾನ ಗೆಲುವಿಗೆ 182 ರನ್‌ ಗುರಿ

Prasthutha|

ದುಬೈ: ಮಾಜಿ ನಾಯಕ ವಿರಾಟ್‌ ಕೊಹ್ಲಿ ಗಳಿಸಿದ ಆಕರ್ಷಕ ಅರ್ಧಶತಕದ ಬಲದಲ್ಲಿ ಮಿಂಚಿದ ಭಾರತ, ಏಷ್ಯಾಕಪ್‌ ಸೂಪರ್‌-4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿಗೆ 182 ರನ್‌ಗಳ ಕಠಿಣ ಗುರಿ ನೀಡಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಟೀಮ್‌ ಇಂಡಿಯಾ, 7 ವಿಕೆಟ್‌ ನಷ್ಟದಲ್ಲಿ 181 ರನ್‌ಗಳಿಸಿದೆ.

- Advertisement -

ಭಾರತಕ್ಕೆ ನಾಯಕ ರೋಹಿತ್‌ ಶರ್ಮಾ-ಕೆಎಲ್‌ ರಾಹುಲ್‌ ಉತ್ತಮ ಆರಂಭ ಒದಗಿಸಿದ್ದರು. ಇಬ್ಬರು ಆರಂಭಿಕರು ತಲಾ 28 ರನ್‌ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು.

ಮೂರನೇ ಕ್ರಮಾಂಕದಲ್ಲಿ ಬಂದ ವಿರಾಟ್‌ ಕೊಹ್ಲಿ, ಪಾಕಿಸ್ತಾನದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. 44 ಎಸೆತಗಳ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌ ಮತ್ತು 4 ಬೌಂಡರಿಗಳ ನೆರವಿನಿಂದ 60 ರನ್‌ಗಳಿಸಿ, 20ನೇ ಓವರ್‌ನಲ್ಲಿ ರನೌಟ್‌ಗೆ ಬಲಿಯಾದರು. ಹಾಂಕಾಂಗ್‌ ವಿರುದ್ಧದ ಕಳೆದ ಪಂದ್ಯದಲ್ಲಿಯೂ ಕೊಹ್ಲಿ 59 ರನ್‌ಗಳಿಸಿ ಅಜೇಯರಾಗುಳಿದಿದ್ದರು.

- Advertisement -

ಸೂರ್ಯಕುಮಾರ್‌ ಯಾದವ್‌ 13 ರನ್‌, ರಿಷಭ್‌ ಪಂತ್‌ 14 ರನ್‌ ಹಾಗೂ ದೀಪಕ್‌ ಹೂಡಾ 16 ರನ್‌ಗಳಿಸಿದರು. ಪಾಕಿಸ್ತಾನದ ಪರ ಬೌಲಿಂಗ್‌ನಲ್ಲಿ ನಾಲ್ವರು ಬೌಲರ್‌ಗಳು ತಲಾ ಒಂದು ವಿಕೆಟ್‌ ಪಡೆದರೆ ಶಾದಾಬ್‌ ಖಾನ್‌ 2 ವಿಕೆಟ್‌ ಪಡೆದರು.

ಟೀಮ್‌ ಇಂಡಿಯಾದಲ್ಲಿ ಎರಡು ಬದಲಾವಣೆ

ಏಷ್ಯಾ ಕಪ್‌ ಟೂರ್ನಿಯ ಸೂಪರ್‌ 4 ಮಹತ್ವದ ಪಂದ್ಯದಲ್ಲಿ ಟೀಮ್‌ ಇಂಡಿಯಾ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.  ಅನುಭವಿ ದಿನೇಶ್‌ ಕಾರ್ತಿಕ್‌ ಅವರನ್ನು ಕೈಬಿಡಲಾಗಿದೆ. ಕಾರ್ತಿಕ್‌ ಬದಲು ದೀಪಕ್‌ ಹೂಡಾ ತಂಡವನ್ನು ಸೇರಿಕೊಂಡಿದ್ದಾರೆ. ಮತ್ತೊಂದೆಡೆ ಜ್ವರದಿಂದ ಬಳಲುತ್ತಿರುವ ಆವೇಶ್‌ ಖಾನ್‌ ಇನ್ನೂ ಚೇತರಿಸಿಕೊಳ್ಳದ ಕಾರಣ  ಸ್ಪಿನ್ನರ್‌ ರವಿ ಬಿಷ್ಣೋಯ್‌ ಸ್ಥಾನ ಪಡೆದಿದ್ದಾರೆ.

ಗಾಯಾಳು ಹನವಾಝ್‌ ದಹಾನಿ ಸ್ಥಾನಕ್ಕೆ ಹಸ್ನೈನ್‌

ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ವೇಗಿ ಶಹನವಾಝ್‌ ದಹಾನಿ, ಭಾರತ ವಿರುದ್ಧದ  ಪಂದ್ಯದಿಂದ ಹೊರ ನಡೆದಿದ್ದಾರೆ. ಇವರ ಸ್ಥಾನಕ್ಕೆ ಮತ್ತೋರ್ವ ವೇಗಿಮ ಮುಹಮ್ಮದ್‌ ಹಸ್ನೈನ್‌ ಅವರನ್ನು ಕರೆತರಲಾಗಿದೆ. ಶುಕ್ರವಾರ (ಸೆಪ್ಟೆಂಬರ್‍‌ 2) ನಡೆದಿದ್ದ ಹಾಂಕಾಂಗ್‌ ವಿರುದ್ಧದ ಪಂದ್ಯದಲ್ಲಿ ಶಹನಾಝ್‌ ದಹಾನಿ ಆಡಿದ್ದರು. ಆದರೆ, ಅವರು ಬೌಲಿಂಗ್‌ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ.

Join Whatsapp