ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಗೆ ಮೀಸಲಿಟ್ಟ 79% ಹಣವನ್ನು ಜಾಹೀರಾತಿಗೆ ವ್ಯಯಿಸಿದ ಮೋದಿ ಸರ್ಕಾರ
Prasthutha: December 10, 2021

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆಗೆ ಮೀಸಲಿಟ್ಟ ಒಟ್ಟು ಮೊತ್ತದ ಶೇಕಡಾ 79 ರಷ್ಟು ಹಣವನ್ನು ಕೇಂದ್ರ ಸರ್ಕಾರ ಜಾಹೀರಾತುಗಳಿಗೆ ಬಳಸಿದೆ ಎಂಬ ಆಘಾತಕಾರಿ ಅಂಶವನ್ನು ಸಂಸದೀಯ ಸಮಿತಿ ಪಾರ್ಲಿಮೆಂಟ್ ಗೆ ತಿಳಿಸಿದೆ.
ಸಂಸದೆ ಹೀನಾ ವಿಜಯ್ ಕುಮಾರ್ ಗವಿತ್ ನೇತೃತ್ವದ ಮಹಿಳಾ ಸಬಲೀಕರಣ ಸಮಿತಿಯು ಸಂಸತ್ತಿಗೆ ಈ ಮಾಹಿತಿಯನ್ನು ನೀಡಿದ್ದು, ಐದು ವರ್ಷಗಳಲ್ಲಿ ಸುಮಾರು 848 ಕೋಟಿ ಬಜೆಟ್ ನಲ್ಲಿ ಕೇವಲ 156.46 ಕೋಟಿ ರೂಪಾಯಿಯನ್ನು ಮಾತ್ರ ಯೋಜನೆ ಅನುಷ್ಠಾನಕ್ಕೆ ಖರ್ಚು ಮಾಡಲಾಗಿದೆ ಎಂದು ತಿಳಿಸಿದೆ.
2016 – 2019 ರ ಸಾಲಿನಲ್ಲಿ ರಾಜ್ಯಗಳಿಗೆ ನೀಡಲಾದ 446.72 ಕೋಟಿ ರೂ.ಗಳಲ್ಲಿ 78.91 ಶೇಕಡಾ ಮೊತ್ತವನ್ನು ಮಾಧ್ಯಮಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.
