ಉಡುಪಿ: ದನದ ಮಾಂಸದ ನೆಪ | ಪೊಲೀಸರಿಂದ ಮನೆಗೆ ನುಗ್ಗಿ ದಾಂಧಲೆ

Prasthutha|

► ಫ್ರಿಡ್ಜ್ ನಲ್ಲಿದ್ದ ದನದ ಮಾಂಸ ಕೊಂಡೊಯ್ದ ಪೊಲೀಸರು!

- Advertisement -

ಉಡುಪಿ: ಮೂಳೂರಿನ ಮನೆಯೊಂದಕ್ಕೆ ನುಗ್ಗಿದ ಕಾಪು ಪೊಲೀಸರು 68 ವರ್ಷದ ಮಹಿಳೆ ಸಹಿತ ಮೂವರಿಗೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ.


ಬೆಳಿಗ್ಗೆ 8.30 ಸುಮಾರಿಗೆ ಕಾಪು ಠಾಣೆಯ ಎಸ್ ಐ ರಾಘವೇಂದ್ರ, ಅಜಿತ್, ರವೀಂದ್ರ, ಆನಂದ ಹಾಗೂ ಜೀಪ್ ಚಾಲಕ ಸಹಿತ ಆರು ಜನರು ಏಕಾಏಕಿ ಮೂಳೂರು ಹಾಜಿ ಅಬ್ಬು ಮುಹಮ್ಮದ್ ಎನ್ನುವವರ ಮನೆಗೆ ನುಗ್ಗಿ ಆಯಿಸಮ್ಮ, ಝಹರಾ ಮತ್ತು ರೆಹನಾ ಎಂಬವರ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಯಾವುದೇ ಸಮವಸ್ತ್ರದಲ್ಲಿ ಇರದ ಆರು ಜನ ಪೊಲೀಸರು ಮನೆ ಬಾಗಿಲು ತಟ್ಟಿದ್ದಾರೆ, ಹೆದರಿದ ಇವರು ಮನೆ ಬಾಗಿಲು ತೆರೆಯದ ಕಾರಣ ಮನೆಯ ಹಿಂಬದಿಯ ಬಾಗಿಲು ಮುರಿದು ಒಳ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ರೆಹನಾ ದೂರಿದ್ದಾರೆ.

- Advertisement -


ಬಳಿಕ ಹಾಲು ಕರೆದು ಬರುತ್ತಿದ್ದ ಝಹರಾ ಅವರು ಅವರು ಯಾಕೆ ಮನೆಗೆ ಬಂದಿದ್ದು, ಯಾರು ನೀವೆಲ್ಲಾ ಎಂದು ಪ್ರಶ್ನಿಸಿ, ಅವರನ್ನು ತಡೆದಾಗ ಅವರಿಗೂ ಹಲ್ಲೆ ಮಾಡಿ, ಬಟ್ಟೆಯನ್ನು ಹರಿದುಹಾಕಿದ್ದಾಗಿ ದೂರಿದ್ದಾರೆ.


ಈ ಸಂದರ್ಭ ಆರವತ್ತೆಂಟು ವರ್ಷದ ಆಯಿಸಮ್ಮ ಅವರಿಗೂ ಹಲ್ಲೆ ಮಾಡಿದ್ದು, ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮನೆಯ ಮಾಲೀಕ ಹಾಜಿ ಅಬ್ಬು ಮುಹಮ್ಮದ್, ಸಂಬಂಧಿಕರೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಾನು ಸಾವಿನ ಮನೆಗೆ ಹೋಗಿದ್ದೆ, ಮನೆಯಲ್ಲಿ ಗಂಡಸರು ಯಾರೂ ಇಲ್ಲದ ಸಮಯ ಮನೆಯ ಬಾಗಿಲು ಮುರಿದು, ಒಳನುಗ್ಗಿ ಮಹಿಳೆಯರಿಗೆ ಹಲ್ಲೆ ಮಾಡಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಮನೆಯ ಸಮಾರಂಭಕ್ಕೆಂದು ಫ್ರೀಡ್ಜ್ ನಲ್ಲಿಟ್ಟಿದ್ದ ಮಾಂಸವನ್ನು ಕೊಂಡೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಪು ಪೊಲೀಸರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Join Whatsapp