ಬೆಂಗಳೂರು: ಜಿ- 20 ಹಣಕಾಸು ಶೃಂಗಸಭೆಗೆ ಕಪ್ಪು ಬಾವುಟ ಪ್ರದರ್ಶಿಸಲು ಹೊರಟಿದ್ದ ರೈತರ ಬಂಧನ

Prasthutha|

ಬೆಂಗಳೂರು: ರಾಜ್ಯದ ರೈತರ ಸಮಸ್ಯೆ, 22 ದಿನಗಳಿಂದ ಧರಣಿ ಕುಳಿತಿರುವ ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯದ ರೈತ ಸಂಘದ ಮುಖಂಡರು ಮಂಗಳವಾರ  ಬೆಂಗಳೂರಿನಲ್ಲಿ ನಡೆಯುವ ಜಿ 20 ಹಣಕಾಸು ಶೃಂಗಸಭೆಗೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದು, ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ದೇಶಾದ್ಯಂತ ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಬೇಕು, ಕೃಷಿ ಸಾಲ ನೀತಿ ಬದಲಾಗಬೇಕು, ದೇಶದ ಜನರಿಗೆ ಆಹಾರ ಉತ್ಪಾದಿಸುವ ವಲಯವಾದ ಕಾರಣ ಕೃಷಿ ಸಾಲ ಬಡ್ಡಿರಹಿತವಾಗಿ ನೀಡಬೇಕು, ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಾಲ ಬಡ್ಡಿ ರಹಿತವಾಗಿ ನೀಡಬೇಕು ಮುಂತಾದ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲು ಹೊರಟಿದ್ದ ರೈತರನ್ನು ಹೆಬ್ಬಾಳ್ ಫ್ಲೈ ಓವರ್  ಬಳಿ   ಪೊಲೀಸರು ರಸ್ತೆ ಮಧ್ಯದಲ್ಲಿಯೇ ತಡೆದರು.

 ಯಾವ ಕಾರಣಕ್ಕಾಗಿ ತಡೆಯುತ್ತಿದ್ದೀರಿ ಎಂದು ರೈತ ಮುಖಂಡರು ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೆ ಮುಂಜಾಗ್ರತಾ ಕ್ರಮ ಎಂದು ಹೇಳಿ ರೈತರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ರೈತರು ಮತ್ತು ಪೊಲೀಸರು ಮಧ್ಯೆ ಮಾತಿನ ಚಕಮಕಿ ನಡೆಯಿತು.

- Advertisement -

 ಪೊಲೀಸ್ ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಧಿಕ್ಕಾರ, ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ರೈತರು ಘೋಷಣೆ ಕೂಗಿದರು.

ವಶಕ್ಕೆ ಪಡೆದ ರೈತರ ಮುಖಂಡರನ್ನು ಪೊಲೀಸರು ವಾಹನದಲ್ಲಿ ಕರೆದೊಯ್ದರು.

Join Whatsapp