ಮಾ.21 ರಿಂದ ರೈತ-ಕಾರ್ಮಿಕ-ದಲಿತ ಮಹಿಳೆಯರಿಂದ ಬೆಂಗಳೂರು ಚಲೋ-ಜನ ಪರ್ಯಾಯ ಬಜೆಟ್ ಅಧಿವೇಶನ

Prasthutha|

ಬೆಂಗಳೂರು: ರೈತ ವಿರೋಧಿ ಕಾಯ್ದೆಗಳ ರದ್ದತಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ, ಉದ್ಯೋಗ ಭದ್ರತೆಗಾಗಿ, ಮಹಿಳೆಯರು-ದಲಿತರ ಮೇಲಿನ ದೌರ್ಜನ್ಯ, ಎನ್‌ಇಪಿ ಕಾಯ್ದೆ ಧಿಕ್ಕರಿಸಿ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ದುಬಾರಿಯಾಗುತ್ತಿರುವುನ್ನು ಖಂಡಿಸಿ ಮಾರ್ಚ್‌ 21 ರಿಂದ 23ರವರೆಗೆ ಬೆಂಗಳೂರಿನಲ್ಲಿ ಜನ ಪರ್ಯಾಯ ಬಜೆಟ್‌ ಅಧಿವೇಶನ ನಡೆಯಲಿದೆ ಎಂದು ಸಂಯುಕ್ತ ಕರ್ನಾಟಕ – ಹೋರಾಟ ಸಮಿತಿ ತಿಳಿಸಿದೆ.

- Advertisement -

ಆಳುವವರ ನೀತಿಯಿಂದಾಗಿ, ಸಾಲು ಸಾಲು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳು ಜನರ ವಿರುದ್ಧ ಇರುವ ಕಾಯ್ದೆಗಳು, ಇವುಗಳು ಸ್ಪಷ್ಟವಾಗಿ ಈ ದೇಶದ ದೊಡ್ಡ ದೊಡ್ಡ ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ದುರಾಸೆಯನ್ನು ತೃಪ್ತಿಪಡಿಸಲು ಜಾರಿಗೆ ತರಲಾಗುತ್ತಿದೆ ಎಂದು ಸಂಯುಕ್ತ ಕರ್ನಾಟಕ – ಹೋರಾಟ ಜಂಟಿ ವೇದಿಕೆಯು ತಿಳಿಸಿದೆ.

ರೈತ ವಿರೋಧಿ ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳು ರದ್ದಾಗಬೇಕು. ವಿದ್ಯುತ್ ಖಾಸಗೀಕರಣ ಮಸೂದೆಯ ವಾಪಸು ಪಡೆಯಬೇಕು. ಎಲ್ಲಾ ಅಗತ್ಯ ದವಸಧಾನ್ಯಗಳೂ ದೊರಕುವಂತೆ ಪಡಿತರ ವ್ಯವಸ್ಥೆಯ ವಿಸ್ತರಣೆ ಮತ್ತು ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿ, ಖಾಸಗೀ ಕೃಷಿ ಮಾರುಕಟ್ಟೆಗಳಿಗೆ ನೀಡಿರುವ ಪರವಾನಗಿಗಳ ರದ್ದಾಗಬೇಕು ಎಂದು ಹೇಳಿದೆ.

- Advertisement -

ಉದ್ಯೋಗ ಭದ್ರತೆ ಮತ್ತು ಕನಿಷ್ಟ 21,000 ರೂ ವೇತನವನ್ನು ಸಾರ್ವತ್ರಿಕಗೊಳಿಸಬೇಕು. ಮಹಿಳೆಯರು ಮತ್ತು ದಲಿತರ ಮೇಲಿನ ಹಿಂಸೆಯನ್ನು ತಡೆಗಟ್ಟಲು, ಸರ್ಕಾರಿ, ಅರಣ್ಯ ಭೂಮಿಯಲ್ಲಿ ಉಳುಮೆ ಅಥವಾ ವಾಸವಿರುವ ಎಲ್ಲಾ ಬಡವರಿಗೆ ಕೂಡಲೇ ಭೂಮಿ – ವಸತಿ ಮಂಜೂರು ಮಾಡಲು ಮತ್ತು ಪರಿಶಿಷ್ಟ ಜಾತಿ(ಎಸ್.ಸಿ.) – ಪರಿಶಿಷ್ಟ ಪಂಗಡ (ಎಸ್.ಟಿ.) ಅಭಿವೃದ್ಧಿ ನಿಧಿಯ ದುರ್ಬಳಕೆ ತಡೆಯಬೇಕು ಎಂದು ಒತ್ತಾಯಿಸಿದೆ.

ಕೃಷಿಯ ವೆಚ್ಚಗಳು ಹೆಚ್ಚುತ್ತಿವೆ, ಆದಾಯ ಕ್ಷೀಣಿಸುತ್ತಿದೆ, ಸಾಲಗಳು ಬೆಳೆಯುತ್ತಿವೆ. ಕಾರ್ಮಿಕರಿಗೆ ಕೆಲಸದ ಭದ್ರತೆ ಇಲ್ಲವಾಗಿದೆ, ಸಂಬಳಗಳು ಕಡಿಮೆಯಾಗಿವೆ, ಪಿಂಚಣಿ ಕಾಣೆಯಾಗಿದೆ, ಕನಿಷ್ಟ ಪಿಎಫ್, ಇಎಸ್‌ಐ ಸಿಗುವುದೂ ದುಸ್ತರವಾಗಿದೆ. ಬಡವರಿಗೆ ಸಿಗಬೇಕಿದ್ದ ಸರ್ಕಾರಿ ಜಾಗ ಬಲಾಢ್ಯರ ಪಾಲಾಗುತ್ತಿದೆ. ಭೂಮಿ ಮತ್ತು ನಿವೇಶನಗಳ ಅಕ್ರಮ ಸಕ್ರಮಕ್ಕಾಗಿ ಲಕ್ಷಾಂತರ ಜನ ಅರ್ಜಿ ಹಾಕಿಕೊಂಡು ದಶಕಗಳಿಂದ ಕಛೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ ಕ್ರೂರ ಕುರುಡು ಪ್ರದರ್ಶಿಸುತ್ತಾ ಬಂದ ಸರ್ಕಾರ ಈಗ ನಗರದ ಮತ್ತು ಗ್ರಾಮೀಣ ಭಾಗದ ಭೂಮಿಗಳನ್ನು ಹರಾಜು ಹಾಕಲು ಮತ್ತು ಮಾರಾಟ ಮಾಡಲು ಹೊರಟಿವೆ ಎಂದು ಆರೋಪಿಸಿದೆ.

Join Whatsapp