ಕಣ್ಣೂರು: ಬೆಂಗಳೂರು ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳು ಸೇರಿದಂತೆ ಇತರ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಕೊಚ್ಚಿ ವಿಶೇಷ ನ್ಯಾಯಾಲಯವು ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಳಿಸಿದೆ.
ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಹೊಂದಿದ ಆರೋಪದಲ್ಲಿ ಬಂಧಿತರಾದ ತಡಿಯಂಡವಿಡ ನಝೀರ್ ಮತ್ತು ಶರಫುದ್ದೀನ್ ಮತ್ತು ಇತರ ಮೂವರ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅವರು ಅಕ್ರಮ ಸ್ಫೋಟಕ ವಸ್ತುವನ್ನು ಹೊಂದಿಲ್ಲ. ಇವರ ವಿರುದ್ಧ ಯಾವುದೇ ಪುರಾವೆಗಳಿಲ್ಲದ ಕಾರಣ ಆರೋಪಿಗಳು ಬಿಡುಗಡೆಗೆ ಅರ್ಹರಾಗಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಕೆ. ಕಮನೀಸ್ ಆದೇಶವನ್ನು ಹೊರಡಿಸಿದ್ದಾರೆ.
ತಡಿಯಂಡವಿಡ ನಝೀರ್ ಮತ್ತು ಶರ್ಫುದ್ದೀನ್ ಹಾಗೂ ಇತರ ಮೂವರ ಮೇಲೆ ದೇಶದೆಲ್ಲೆಡೆ ಸ್ಫೋಟ ನಡೆಸಲು ಸಂಚು ರೂಪಿಸಿದ ಆರೋಪ ಹೊರಿಸಲಾಗಿತ್ತು.
ವಿಶೇಷ ನ್ಯಾಯಮೂರ್ತಿ ಕೆ. ಕಮನೀಸ್ ಅವರು ಆರೋಪಿಗಳ ವಕೀಲರು ಸ್ಫೋಟದ ಬಗ್ಗೆ ವಾದಿಸಿಲ್ಲ. ಆದರೆ ಕೋರ್ಟು ಪರಿಶೀಲನೆ ನಡೆಸಿದಾಗ ಸ್ಫೋಟಕ ದೊರಕಿದ್ದಕ್ಕೆ ಸಾಕ್ಷ್ಯ ಇಲ್ಲ. ಹಾಗಾಗಿ ಬಿಡುಗಡೆ ಮಾಡಲು ಆದೇಶ ಮಾಡಿದರು.
ಕಣ್ಣೂರು ಜಿಲ್ಲೆಯ ಚೆಂಬಲೋಡ್ ಗ್ರಾಮ ಪಂಚಾಯತಿಯ ಐದನೆಯ ಆರೋಪಿ ಫಯಾರೂಸ್ ಮನೆಯಲ್ಲಿ ಸ್ಫೋಟಕ ಪತ್ತೆಯಾಗಿದೆ ಎಂದು ಆರೋಪಿಸಿ 2009ರಲ್ಲಿ ಪೊಲೀಸರು ಇವರನ್ನು ಬಂಧಿಸಿದ್ದರು.
ಆ ಮನೆಯಲ್ಲಿ ಸ್ಫೋಟಕ ವಶಪಡಿಸಿಕೊಂಡುದಕ್ಕೆ ಸಾಕ್ಷ್ಯ ಇಲ್ಲ ಎಂದು ನ್ಯಾಯಾಧೀಶರು ಹೇಳಿದರು.