ಬೆಂಗಳೂರು: ಸೆ.30ರಂದು ‘ಬ್ಯಾರೀಸ್ ಸೌಹಾರ್ದ ಭವನ’ ಲೋಕಾರ್ಪಣೆ

Prasthutha|

ಬೆಂಗಳೂರು: ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಮೂಲಕ ಸುಮಾರು 16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಬ್ಯಾರೀಸ್ ಸೌಹಾರ್ದ ಭವನ ಸೆ.30ರ ಶನಿವಾರದಂದು ಲೋಕಾರ್ಪಣೆಗೊಳ್ಳಲಿದೆ.  

- Advertisement -

ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿರುವ ಬ್ಯಾರೀಸ್ ಸೌಹಾರ್ದ ಭವನ – ಬ್ಯಾರೀಸ್ ಎಮಿಟಿ ಎಂಬ ಕಟ್ಟಡಕ್ಕೆ ಸರ್ಕಾರವು ಕೂಡ ಸಮುದಾಯ ಅಭಿವೃದ್ಧಿಯ ಭಾಗವಾಗಿ ಆರು ಕೋಟಿಯ ನೆರವು ನೀಡಿದ್ದು, ಉಳಿದ ಮೊತ್ತವನ್ನು ಬ್ಯಾರಿ ಸಮುದಾಯದ ಗಣ್ಯರು ಹಾಗೂ ಉದ್ಯಮಿಗಳು ಭರಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರ ಮುಂದಾಳುತ್ವದಲ್ಲಿ ಬ್ಯಾರೀಸ್ ಗ್ರೂಪ್‌ನ ಸೈಯ್ಯದ್ ಮೊಹಮ್ಮದ್ ಬ್ಯಾರಿ ಅವರ ಉಸ್ತುವಾರಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.

- Advertisement -

2015ರ ನವೆಂಬರ್‌ನಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದ್ದರು. ಸುಮಾರು 8 ವರ್ಷಗಳ ಬಳಿಕ ಇಂದು ಲೋಕಾರ್ಪಣೆಗೆ ಸಜ್ಜಾಗಿ ನಿಂತಿರುವ ಈ ಕಟ್ಟಡವನ್ನು ಸೆ.30ರಂದು ಸಿದ್ದರಾಮಯ್ಯನವರೇ ಉದ್ಘಾಟಿಸಲಿದ್ದಾರೆ.

ಬ್ಯಾರೀಸ್ ಸೌಹಾರ್ದ ಭವನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಬಿ ಎ ಮೊಹಿದ್ದೀನ್ ಸ್ಮಾರಕ ಸಭಾಂಗಣವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು ಟಿ ಖಾದರ್, ಮಾಜಿ ಸಿಎಂಗಳಾದ ಹೆಚ್‌ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ. ಫಾರೂಕ್ ವಹಿಸಲಿದ್ದಾರೆ. ಬ್ಯಾರಿ ಸೌಹಾರ್ದ ಭವನ ಕಟ್ಟಡ ಸಮಿತಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

Join Whatsapp