ಕಾವೇರಿ ಕಿಚ್ಚು: ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

Prasthutha|

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್ ಮಾಡಿ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬೆಂಗಳೂರಿನಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ.

- Advertisement -

ನಗರದ ಫ್ರೀಡಂಪಾರ್ಕ್​ನಲ್ಲಿ ರೈತ ಪರ ಸಂಘಟನೆಗಳು ಧರಣಿ ನಡೆಸುತ್ತಿದ್ದು ಈ ವೇಳೆ ರೈತನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

 ತಕ್ಷಣ ರೈತನನ್ನು ರಕ್ಷಿಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದಿದ್ದಾರೆ.

- Advertisement -

ಧರಣಿ ವೇಳೆ ಕುಸಿದುಬಿದ್ದ ಓರ್ವ ಕನ್ನಡಪರ ಹೋರಾಟಗಾರ

ಫ್ರೀಡಂಪಾರ್ಕ್​ನಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸುತ್ತಿವೆ. ಧರಣಿ ವೇಳೆ ಓರ್ವ ಕನ್ನಡಪರ ಹೋರಾಟಗಾರ ಕುಸಿದುಬಿದ್ದಿದ್ದಾರೆ. ಅಸ್ವಸ್ಥಗೊಂಡ ಕಾರ್ಯಕರ್ತನನ್ನು ತಕ್ಷಣವೇ ಪೊಲೀಸರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಫ್ರೀಡಂ ಪಾರ್ಕ್ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು ಐನೂರಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಾಲ್ಕು ಕೆಎಸ್ಆರ್​ಪಿ ತುಕಡಿ, ಒಂದು ಅಗ್ನಿಶಾಮಕ ವಾಹನ, ಒಂದು ವಾಟರ್ ಜೆಟ್ ನಿಯೋಜನೆ ಮಾಡಲಾಗಿದೆ.

ಎಸ್.ಎಲ್‌. ಭೈರಪ್ಪ, ಚಂದ್ರಶೇಖರ್ ಕಂಬಾರ, ನಾಗತೀಹಳ್ಳಿ ಚಂದ್ರಶೇಖರ್ ಸೇರಿದಂತೆ ಕಾವೇರಿ ವಿಚಾರದ ಬಗ್ಗೆ ಧ್ವನಿ ಎತ್ತದ ಸಾಹಿತಿಗಳ‌ ಪೋಸ್ಟರ್ ಹಿಡಿದು ತಡ ರಾತ್ರಿ ಫ್ರೀಡಂಪಾರ್ಕ್​ ಬಳಿ ಪ್ರತಿಭಟನೆ ನಡೆಸಲಾಯಿತು. ಮಿಡ್ ನೈಟ್ ಕಾರ್ಯಾಚರಣೆ ಮಾಡಿರುವ ಪೊಲೀಸರು, ಸುಮಾರು 50ಕ್ಕೂ ಹೆಚ್ಚು ಜನರನ್ನ ರಾತ್ರಿಯೇ ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಗೆ ವಿವಿಧ ರೀತಿಯಲ್ಲಿ ಪ್ಲಾನ್‌ ಮಾಡಿದ್ದವರನ್ನ ವಶಕ್ಕೆ ಪಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 2016 ರಲ್ಲಿ ಬೆಂಕಿ ಹಚ್ಚಿದ್ದವರು, ಕಲ್ಲು ತೂರಾಟ ಮಾಡಿ ಗಲಭೆ ಮಾಡಿದ್ದವರನ್ನು ವಶಕ್ಕೆ ಪಡೆಯಲಾಗಿದೆ.

ಯಾವುದೇ ಬಂದ್​ಗೆ ನಮ್ಮ ಬೆಂಬಲ ಇಲ್ಲ

ಇನ್ನು ಮತ್ತೊಂದೆಡೆ ಯಾವುದೇ ಬಂದ್​ಗೆ ನಮ್ಮ ಬೆಂಬಲ ಇಲ್ಲ ಎಂದು ಬೆಂಗಳೂರಿನಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ. ಕನ್ನಡ ಭಾಷೆ, ನೆಲ, ಜಲದ ವಿಚಾರವಾಗಿ ನನ್ನ ಹೋರಾಟ ಮುಂದುವರಿಯುತ್ತೆ. ಬಂದ್ ನಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತೆ. ದಿನಗೂಲಿ ನೌಕರರಿಗೆ ಈ ಬಂದ್ ತೊಂದರೆ ಆಗುತ್ತೆ. ಬಂದ್ ನಿಂದ ಕಾವೇರಿಯನ್ನು ಉಳಿಸಿಕೊಳ್ಳಲು ಆಗೊಲ್ಲ. ಬಂದ್ ಅಂದ್ರೆ ಟೌನ್ ಹಾಲ್ ನಿಂದ ಮೆರವಣಿಗೆ ಬರೋದು ಅಷ್ಟೇನಾ? ಮಾತಿಗೆ ಮುಂಚೆ ಬಂದ್ ಒಂದೇ ಬ್ರಹ್ಮಾಸ್ತ್ರ ಆಗ್ಬಾರ್ದು. ರಾಜಕಾರಿಣಿಗಳನ್ನ ನಂಬಿಕೊಂಡು ಹೋರಾಟಕ್ಕೆ ಹೋಗ್ಬಾರ್ದು ಎಂದರು.