ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಹಾಡಹಗಲೇ ಕಾರಿನಲ್ಲಿ ತೆರಳುತ್ತಿದ್ದವರಿಂದ 80 ಲಕ್ಷ ರೂ ದೋಚಿ ಪರಾರಿಯಾಗಿರುವ ಸಿನಿಮೀಯ ಘಟನೆ ವಿಲ್ಸನ್ ಗಾರ್ಡನ್ ನಲ್ಲಿ ನಡೆದಿದೆ.
ಕೇವಲ 15 ನಿಮಿಷದಲ್ಲಿ 80 ಲಕ್ಷ ರೂ. ಹಣವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕುಮಾರಸ್ವಾಮಿ ಹಾಗೂ ಚಂದನ್ ಎಂಬ ಇಬ್ಬರು 80 ಲಕ್ಷ ರೂ. ಹಣವನ್ನು ಕಾರಿನ ಹಿಂಬದಿಯ ಸೀಟ್ನಲ್ಲಿಟ್ಟು,ತುಮಕೂರಿನಿಂದ ಸೇಲಂಗೆ ಪ್ರಯಾಣ ಬೆಳೆಸಿದ್ದರು.
ಕೆ.ಹೆಚ್ ರಸ್ತೆ ಸಿಗ್ನಲ್ ಬಳಿ ನಿಂತಿರುವಾಗ ಮಧ್ಯಾಹ್ನದ ಹೊತ್ತಿನಲ್ಲಿ ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದಾರೆ. ವಿಲ್ಸನ್ ಗಾರ್ಡನ್ನ ರಿವೋಲಿ ಜಂಕ್ಷನ್ ಬಳಿ ಕಾರನ್ನು ನಿಲ್ಲಿಸಿದ್ದಾರೆ. ತೆಲುಗು ಭಾಷೆಯಲ್ಲಿ ಮಾತನಾಡಿಕೊಂಡು ಬಂದು ದುಷ್ಕರ್ಮಿಗಳು ಪೊಲೀಸ್ ಎಂದು ಹೇಳಿ ಕಾರು ಹತ್ತಿಕೊಂಡಿದ್ದಾರೆ. ಒಬ್ಬ ಸಬ್ ಇನ್ಸ್ಪೆಕ್ಟರ್ ಹಾಗೂ ಇಬ್ಬರೂ ಕಾನ್ಸ್ಟೇಬಲ್ಗಳ ವೇಷದಲ್ಲಿ ಆರೋಪಿಗಳು ಬಂದಿದ್ದರು. ಬಳಿಕ ಲಾಠಿ ತೋರಿಸಿ ಬೆದರಿಸಿ ಹಣ ಕದ್ದೊಯ್ದಿದ್ದಾರೆ.
ಅಡಿಕೆ ವ್ಯಾಪಾರದ ದುಡ್ಡನ್ನು ತೆಗೆದುಕೊಂಡು ಹೋಗುತ್ತಿದ್ದ ಚಾಲಕ ಚಂದನ್ ಹಾಗೂ ಕುಮಾರಸ್ವಾಮಿಗೆ ಆರಂಭದಲ್ಲಿ, ಇವರು ನಿಜವಾಗಿಯೂ ಪೊಲೀಸರೇ ಎಂಬ ಅನುಮಾನ ವ್ಯಕ್ತವಾಗಿದೆ. ಬಂದಿದ್ದವರು ನಕಲಿ ಪೊಲೀಸರು ಎಂದು ದೃಢಪಡಿಸಿಕೊಳ್ಳುವಷ್ಟರಲ್ಲಿ ಆರೋಪಿಗಳು ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ. ನಂತರ ಇವರಿಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.