ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನ ಹಿರಿಯ ನಾಯಕ ಸುಬ್ರತಾ ಮುಖರ್ಜಿ, ಗುರುವಾರ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸುಬ್ರತಾ ನಿಧನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಪಂಚಾಯತ್ ರಾಜ್ ಸಚಿವರಾಗಿದ್ದ ಸುಬ್ರತಾ ಅವರು ಪತ್ನಿ, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮಾತ್ರವಲ್ಲ ಮುಖರ್ಜಿ ಅವರು ಇತರ ಮೂರು ಇಲಾಖೆಯ ಉಸ್ತುವಾರಿಯನ್ನು ಹೊತ್ತುಕೊಂಡಿದ್ದರು.
ಈ ವಾರದ ಆರಂಭದಲ್ಲಿ ಅಂಜಿಯೋಪ್ಲ್ಯಾಸ್ಟ್ ಗೊಳಗಾಗಿದ್ದ ಸುಬ್ರತಾ ಮುಖರ್ಜಿ ರಾತ್ರಿ 9.30 ರ ವೇಳೆಗೆ ತೀವ್ರ ಹೃದಯ ಸ್ತಂಭನದಿಂದ ನಿಧನರಾದರು ಎಂದು ರಾಜ್ಯ ಸಚಿವ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ.
ಕಾಳಿಘಾಟ ನಿವಾಸದಲ್ಲಿ ಕಾಳಿ ಪೂಜೆ ನೆರವೇರಿಸುತ್ತಿದ್ದ ಮುಖ್ಯಮಂತ್ರಿ ಎಸ್.ಎಸ್.ಕೆ.ಎಂ ಆಸ್ಪತ್ರೆಗೆ ಭೇಟಿ ನೀಡಿ ಸುಬ್ರತಾ ಅವರ ನಿಧನವನ್ನು ಘೋಷಿಸಿದರು. ಸಮರ್ಪಿತ ನಾಯಕರ ಮುಖರ್ಜಿ ಅವರ ನಿಧನದಿಂದ ಪಕ್ಷ ಮತ್ತು ಸಮಾಜ, ಅದರಲ್ಲೂ ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟ ಎಂದು ಮಮತಾ ಸಂತಾಪ ಸೂಚಿಸಿದ್ದಾರೆ.
ಈ ಮಧ್ಯೆ ಸುಬ್ರತಾ ಮುಖರ್ಜಿ ಅವರ ಅಕಾಲಿಕ ನಿಧನಕ್ಕೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಸಂತಾಪ ಸೂಚಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಡಾ. ಸುಕಾಂತ್ ಮಜುಂದಾರ್ ಮುಖರ್ಜಿ ಅವರ ನಿಧನ ಬಂಗಾಳ ರಾಜಕೀಯ ಮಹಾಯುಗದ ಅಂತ್ಯ ಎಂದು ಬಣ್ಣಿಸಿದ್ದಾರೆ.
ಹಿರಿಯ ಸಿಪಿಐ (ಎಂ) ನಾಯಕ, ಕೋಲ್ಕತ್ತಾ ಮಾಜಿ ಮೇಯರ್ ಬಿಕಾಸ್ ರಂಜನ್ ಭಟ್ಟಾಚಾರ್ಯ ಮಾತನಾಡಿ ರಾಜ್ಯವೊಂದು ಹಿರಿಯ ಮುತ್ಸದಿ, ಅಭಿವೃದ್ಧಿಯ ಹರಿಕಾರ, ದೀಮಂತ ನಾಯಕನೊಬ್ಬನನ್ನು ಕಳೆದು ಕೊಂಡಿದೆ ಎಂದು ವಿಷಾದಿಸಿದರು.