ಕೋಲ್ಕತ್ತ: ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ 42 ಕ್ಷೇತ್ರಗಳಿಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಅಭಿಷೇಕ್ ಬ್ಯಾನರ್ಜಿ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು.
ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಬೆಹ್ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರತಿನಿಧಿಸುತ್ತಿದ್ದಾರೆ.
ಕಳೆದ ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸಿನಿಮಾ ತಾರೆಯರಾದ ಮಿಮಿ ಚಕ್ರವರ್ತಿ ಹಾಗೂ ನುಸ್ರತ್ ಜಹಾನ್ ಅವರಿಗೆ ಈ ಬಾರಿ ಟಿಕೆಟ್ ಲಭಿಸಿಲ್ಲ.
ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಅಭಿಷೇಕ್ ಬ್ಯಾನರ್ಜಿ, ಅಸಾಂಸೋಲ್ನಿಂದ ಶತ್ರುಘನ್ ಸಿನ್ಹಾ, ಲೋಕಸಭೆ ಸದಸ್ಯತ್ವದಿಂದ ವಜಾಗೊಂಡಿರುವ ಮಹುವಾ ಮೊಯಿತ್ರಾ ಅವರು ಕೃಷ್ಣನಗರ ಕ್ಷೇತ್ರದಿಂದ, ಶ್ರೀರಾಮಪುರದಿಂದ ಕಲ್ಯಾಣ್ ಬ್ಯಾನರ್ಜಿ, ಭರ್ದಮಾನ್ನಿಂದ ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್, ಡಂ ಡಂನಿಂದ ಸುಗತಾ ರಾಯ್ ಸ್ಪರ್ಧೆ ಮಾಡಲಿದ್ದಾರೆ.