ಕಿಂಡಿ ಅಣೆಕಟ್ಟಿನಿಂದ ಲಾಭವೇ ಹೆಚ್ಚು: ಸುಬ್ರಹ್ಮಣ್ಯ ಉಪಾಧ್ಯಾಯ

Prasthutha|

ಮಡಿಕೇರಿ: ಕಿಂಡಿ ಅಣೆಕಟ್ಟಿನಿಂದ ಹೆಚ್ಚಿನ ಲಾಭವಾಗಿದೆ. ಓಡಾಡಲು ಸೇತುವೆಯಾಗಿಯೂ, ಬೇಸಿಗೆಯಲ್ಲಿ ಅಂತರ್ಜಲ ಹೆಚ್ಚಿಸುವ ಅಣೆಕಟ್ಟೆಯಾಗಿಯೂ ಇದು ಬಳಕೆಯಾಗುತ್ತಿದೆ ಎಂದು ಕೊಡಗು ಜಿಲ್ಲಾ ಮಾಧ್ಯಮ ಪ್ರಮುಖ ಹಾಗೂ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉಪಾಧ್ಯಾಯ ಹೇಳಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಿಂಡಿ ಅಣೆಕಟ್ಟೆಗೆ ಮರದದಿಮ್ಮಿಗಳು ಸಿಲುಕಿ ಪ್ರವಾಹ ಉಂಟಾಗಿದ್ದು ನಿಜ. ಈ ಅಣೆಕಟ್ಟೆಯಿಂದ ಸುಮಾರು 60 ಮನೆಗಳಿಗೆ ಅನುಕೂಲವಾಗಿದೆ. ಅದರಿಂದ ತೊಂದರೆಯಾದವರಿಗೆ ಸರ್ಕಾರದ ನಿಯಮಾನುಸಾರ ಎಲ್ಲ ಬಗೆಯ ಪರಿಹಾರ ನೀಡಲಾಗಿದೆ. ಬೇರೆಡೆ ಅವರಿಗೆ ಮನೆ ನಿರ್ಮಿಸಿಕೊಡಲೂ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.


ಬೆಂಚಿನ ಮೇಲೆ ಕಟ್ಟಿಕೊಂಡು ರೋಗಿಗಳನ್ನು ಹೊತ್ತುಕೊಂಡು ಹೋಗುವಂತಹ ದಯನೀಯ ಸ್ಥಿತಿ ಅಲ್ಲಿ ಇತ್ತು. ಆದ್ದರಿಂದ ಕೇವಲ ಸೇತುವೆ ನಿರ್ಮಾಣ ಮಾಡುವುದರ ಬದಲು ಅಣೆಕಟ್ಟೆ ಕಟ್ಟಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯೂ ನೀಗುತ್ತದೆ. ಅಂತರ್ಜಲ ಹೆಚ್ಚುತ್ತದೆ ಎಂಬ ಉದ್ದೇಶದಿಂದ ಕಟ್ಟಲಾಗಿದೆ ಎಂದು ಹೇಳಿದರು.

- Advertisement -


ವಿರೋಧ ಪಕ್ಷಗಳು ಅಲ್ಲಿರುವ ಜನರಿಗೆ ತಪ್ಪು ಮಾಹಿತಿ ನೀಡಿ ಕಿಂಡಿ ಅಣೆಕಟ್ಟೆಯಿಂದಲೇ ಪ್ರವಾಹ ಉಂಟಾಗುತ್ತಿದೆ ಎಂದು ದಾರಿ ತಪ್ಪಿಸುತ್ತಿದ್ದಾರೆ. ವಾಸ್ತವದಲ್ಲಿ ರಾಜ್ಯದ ಎಲ್ಲ ಕಡೆಯೂ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅದೇ ರೀತಿ ಇಲ್ಲೂ ಪ್ರವಾಹ ಉಂಟಾಗಿದೆ ಎಂದರು.


ಇದು ಬರಗಾಲದ ದಿನಗಳಲ್ಲಿ ಭೂಮಿ ಬರಡಾಗಬಾರದೆಂದು ಅಲ್ಲಿ ನೀರಿನ ಮಟ್ಟ ಕಾಯ್ದಿರಿಸುವಂತಹ ದೂರಗಾಮಿ ಯೋಜನೆಯಾಗಿದೆ. 10 ಕಡೆ ಈ ಯೋಜನೆ ಅನುಷ್ಠಾನಗೊಂಡಿದೆ. ಆನೆಹಳ್ಳದಲ್ಲಿ ಕಟ್ಟಿರುವ ಅಣೆಕಟ್ಟೆಯಿಂದ ಬೇಸಿಗೆಯಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿದೆ. ಕೊಯನಾಡಿನಲ್ಲೂ ಅಂತರ್ಜಲ ಏರಿಕೆಯಾಗಿದೆ. ಬೆಳೆಗಾರರಿಗೆ ಇದರಿಂದ ಉಪಯೋಗ ಆಗಿದೆ. ಇಂತಹ ದೂರಗಾಮಿ ಯೋಜನೆಯನ್ನು ಅನಗತ್ಯವಾಗಿ ಟೀಕಿಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ಸಂತ್ರಸ್ತರ ಪೈಕಿ ಕೆಲವರಿಗೆ ಕುಮ್ಮಕ್ಕು ನೀಡಿ ಶಾಸಕರನ್ನು ಅವಹೇಳನ ಮಾಡುತ್ತಿರುವುದೂ ಸರಿಯಲ್ಲ. ಒಂದು ವೇಳೆ ಇದು ನಿಲ್ಲದೇ ಮುಂದುವರಿದರೆ ತಕ್ಕ ಉತ್ತರ ಕೊಡಲಾಗುವುದು ಎಂದು ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ, ನವೀನಕುಮಾರ್, ಜಯಪ್ರಸಾದ, ಶಿವಪ್ರಸಾದ, ಲೋಕಯ್ಯ ಇದ್ದರು.

Join Whatsapp