ಬೆಳ್ತಂಗಡಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಯುವಕರ ತಂಡವೊಂದು ವಕ್ತಿಯೊಬ್ಬರ ಮೇಲೆ ಮೇಲೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆ ವೇಳೆ ಒಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ್ (55) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಳೆದ 10 ದಿನಗಳ ಹಿಂದೆ ನಾರಾಯಣ ನಾಯ್ಕ್ (47) ಎಂಬವರು ಸ್ಥಳೀಯ ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ರಾಜಿ ಸಂದಾನ ನಡೆದಿತ್ತು. ಆದರೆ ಇಂದು ಸಂಜೆ ವೇಳೆ ನಾಯ್ಕ್ ಮತ್ತೆ ಬಾಲಕಿಯನ್ನು ಕರೆದು ಮಾತಾಡಿಸಿದ್ದ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಾರಾಯಾಣ ನಾಯ್ಕ್ ನನ್ನು ಯುವಕರ ತಂಡ ತಡೆದು ಹಲ್ಲೆಗೆ ಮುಂದಾಗಿದೆ. ಹಲ್ಲೆ ಬಿಡಿಸಲು ಬಂದ ಜಾರಪ್ಪ ನಾಯ್ಕ್ ಅವರ ಮೇಲೂ ಯುವಕರು ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಈ ವೇಳೆ ಜಾರಪ್ಪ ನಾಯ್ಕ್ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ನಾರಾಯಣ ನಾಯ್ಕ್ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಜಾರಪ್ಪ ನಾಯ್ಕ್ ಅವರ ಪುತ್ರ ರಾಜಶೇಖರ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.