ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ; ಗೋವಾದಲ್ಲಿ ಆಕ್ರೋಶ | ಹೊಸವರ್ಷ ಆಚರಣೆ ಸಂದರ್ಭ ಬೀಫ್ ಭಾರೀ ಅಭಾವ

Prasthutha|

ಪಣಜಿ : ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತವಿರುವ ಗೋವಾ ಜನರು ಆಕ್ರೊಶಿತರಾಗಿದ್ದಾರೆ. ಪೂರೈಕೆಯ ಕೊರತೆಯಿಂದಾಗಿ ಗೋವಾದಲ್ಲಿ ಗೋಮಾಂಸದ ತೀವ್ರ ಅಭಾವ ಕಾಡುತ್ತಿದೆ ಎಂದು ವರದಿಗಳು ತಿಳಿಸಿವೆ.

ಕ್ರಿಸ್ ಮಸ್, ಹೊಸ ವರ್ಷದ ಈ ಸಂದರ್ಭದಲ್ಲಿ ಔತಣಕೂಟಕ್ಕೆ ಸಾಕಷ್ಟು ಪ್ರಮಾಣದ ಗೋಮಾಂಸ ಸಿಗುತ್ತಿಲ್ಲ ಎಂಬ ಸುದ್ದಿ ಕೇಳಿ ಗೋವಾದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶ ಎಷ್ಟರಮಟ್ಟಿಗಿದೆ ಎಂದರೆ, ಸ್ವತಃ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೇ ಈ ಬಗ್ಗೆ ಪ್ರತಿಕ್ರಿಯಿಸುವಂತಾಗಿದೆ. ಸಮಸ್ಯೆ ಪರಿಹರಿಸುವುದಾಗಿ ಅವರು ಹೇಳಿದ್ದಾರೆ.

- Advertisement -

2015ರಲ್ಲಿ ಮಹಾರಾಷ್ಟ್ರದಲ್ಲಿ ಗೋ ಹತ್ಯೆ ನಿಷೇಧಿಸಿದ ಬಳಿಕ, ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ಮಾಂಸ ಪೂರೈಕೆಯಾಗುತಿತ್ತು. ಮುಖ್ಯವಾಗಿ ಬೆಳಗಾವಿ ಜಿಲ್ಲೆ ಮೂಲಕ ಸಾಕಷ್ಟು ಪ್ರಮಾಣದ ಬೀಫ್ ಗೋವಾ ಗಡಿ ದಾಟುತಿತ್ತು.

ಕಡಿಮೆ ಜನಸಂಖ್ಯೆ ಇರುವ ಗೋವಾದಲ್ಲಿ ಪ್ರತಿದಿನ ಸುಮಾರು 25 ಟನ್ ಬೀಫ್ ಬಳಕೆಯಾಗುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುವುದರಿಂದ, ಇಲ್ಲಿ ಗೋಮಾಂಸಕ್ಕೆ ಈ ಸಂದರ್ಭ ಭಾರೀ ಬೇಡಿಕೆಯಿರುತ್ತದೆ.

ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧಿಸುವುದನ್ನು ತಡೆಯುವಂತೆ ತಮ್ಮ ಬಿಜೆಪಿ ನಾಯಕತ್ವದ ಮನವೊಲಿಸುವಂತೆ ಗೋವಾದ ಬೀಫ್ ಉದ್ಯಮಿಗಳು ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

ತಮಗೆ ಅನುಕೂಲವಿರುವ ರಾಜ್ಯಗಳಲ್ಲಿ ಗೋಮಾಂಸ ನಿಷೇಧಿಸಿರುವ ಬಿಜೆಪಿ, ಅನಾನುಕೂಲವಿರುವ ಗೋವಾದಂತಹ ರಾಜ್ಯಗಳಲ್ಲಿ ಅದನ್ನು ನಿಷೇಧಿಸಿಲ್ಲ. ಆ ಮೂಲಕ ಬಿಜೆಪಿಯು ಗೋವಿನ ವಿಚಾರದಲ್ಲಿ ರಾಜಕೀಯ ನಡೆಸುತ್ತಿರುವುದು ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ.  

- Advertisement -