ಬ್ಯಾರಿ ಭಾಷಾ ದಿನಾಚರಣೆ, ಬ್ಯಾರಿ ವಚನಮಾಲೆ ಪುಸ್ತಕ ಬಿಡುಗಡೆ

Prasthutha|

ಮಂಗಳೂರು: ಎಲ್ಲಾ ಭಾಷೆ ಜೊತೆಗೆ ಇರುವ ಸಾಮರಸ್ಯ ನಮ್ಮದು. ಕರಾವಳಿ ತುಳು, ಬ್ಯಾರಿ, ಕೊಂಕಣಿ ಭಾಷೆಯ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೀಗಾಗಿ ಸಹಬಾಳ್ವೆ, ಸಹೋದರತೆ ಮುಖ್ಯ ಆಗುತ್ತದೆ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದ್ದಾರೆ.

- Advertisement -

ಅವರು ಸೋಮವಾರ ಸಂಜೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ “ಬ್ಯಾರಿ ಭಾಷಾ ದಿನಾಚರಣೆ ಹಾಗೂ ಬ್ಯಾರಿ ವಚನಮಾಲೆ ಪುಸ್ತಕ ಬಿಡುಗಡೆ” ಸಮಾರಂಭವನ್ನು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಕ್ಯಾಂಪಸ್ ಬದಲು ವಿ.ವಿ. ಕಾಲೇಜಿನಲ್ಲೇ ಬ್ಯಾರಿ ಪೀಠಕ್ಕೆ ಜಾಗ ನೀಡಲಾಗಿದೆ. ಮಂಗಳೂರು ವಿವಿಯ ಮೂರು ಜಿಲ್ಲೆಗಳು ಬಹು ಭಾಷೆ, ಬಹು ಸಂಸ್ಕೃತಿಯದಾಗಿದ್ದು ಬ್ಯಾರಿ ಜನಾಂಗ ವಿಶಿಷ್ಟವಾದುದಾಗಿದೆ. ಸಹಬಾಳ್ವೆ ಇಲ್ಲಿನ ಹೆಗ್ಗುರುತಾಗಲಿ ಎಂದು ಹೇಳಿದರು.

- Advertisement -

ಲೇಖಕ ಹಾಗೂ ಸ್ನೇಹ ಪಬ್ಲಿಕ್ ಸ್ಕೂಲ್ ಬಜಾಲ್ ಇದರ ಶಿಕ್ಷಕ ಅಶೀರುದ್ದೀನ್ ಆಲಿಯಾ ಇವರು ಬರೆದ “ಬ್ಯಾರಿ ವಚನಮಾಲೆ” ಕೃತಿಯನ್ನು ಸಾಹಿತಿ ಹಾಗೂ ಪತ್ರಕರ್ತ ಹಂಝ ಮಲಾರ್ ಬಿಡುಗಡೆ ಮಾಡಿ, ಬ್ಯಾರಿ ಪುಸ್ತಕ ಬಿಡುಗಡೆ ಬ್ಯಾರಿ ನಾಲಾಚರಣೆ ಅರ್ಥಪೂರ್ಣ ಆಗುವಂತೆ ಮಾಡಿದೆ. 200 ವಚನಗಳನ್ನು ಅಶೀರುದ್ದಿನ್ ಆಲಿಯಾ ಬರೆದಿದ್ದು, ವಚನಗಳ ಕೊನೆಯಲ್ಲಿ ಬ್ಯಾರಿ ಎಂದು ಬಂದಿರುವುದು ಅದ್ಭುತವಾಗಿದೆ ಎಂದು ಅವರು ಹೇಳಿದರು.

ಸ.ಪ.ಪೂ, ಕಾಲೇಜು ಬಿ,ಮೂಡ ಬಂಟ್ವಾಳ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಬ್ಯಾರಿ ಭಾಷೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಪ್ರಾಂಶುಪಾಲರಾದ ಅನಸೂಯಾ ರೈ ಸೌಹಾರ್ದದ ಹೆಗ್ಗುರುತು. ಕಾಲೇಜಿನಲ್ಲಿ ಮಾತ್ರ ಅಲ್ಲ, ಅವರ ಜಾಗದಲ್ಲಿ 40ರಷ್ಟು ಬ್ಯಾರಿಗಳು ಮನೆ ಕಟ್ಟಿದ್ದಾರೆ. ಅನಸೂಯಾರ ತಂದೆ, ಕಾರ್ಮಿಕ ಬ್ಯಾರಿಗಳಿಗೆ ನೋಂದಣಿಯ ಹೊರತು ಬೇರೆ ಹಣ ಪಡೆಯದೆ ಪಟ್ಟಾ ಜಾಗ ನೀಡಿದ್ದಾರೆ ಎಂದು ಹೇಳಿದರು.

ಜನಗಣತಿ ಪ್ರಕಾರ ಭಾರತದಲ್ಲಿ 1,735 ಭಾಷೆಗಳಿವೆ. ಆದರೆ ಬ್ಯಾರಿ ಭಾಷೆ ಬರೆಯುವ ಕೆಲಸ ಕಳೆದ ದಶಕದಿಂದಷ್ಟೆ ನಡೆದಿದೆ. ರಹೀಂ ಉಚ್ಚಿಲ್, ಮುಹಮ್ಮದ್ ಹನೀಫ್ ಮೊದಲಾದವರು ಬ್ಯಾರಿ ಭಾಷೆಗೆ ಸ್ಥಾನ ದೊರಕಿಸಿದವರಲ್ಲಿ ಪ್ರಮುಖರು. ಭಾವ ತೆರೆಯನ್ನು ಶಬ್ದ ತೆರೆಯಾಗಿ ಹೊರ ಬೀಳುವುದು ಭಾಷೆ. ತಾಯಿ ಭಾಷೆ ಜಗತ್ತಿನ ಎಲ್ಲೆಡೆ ಮಹತ್ವ ಪಡೆದಿದೆ. ಬ್ಯಾರಿ ನಮ್ಮ ತಾಯಿ ಭಾಷೆ ಆಗಿ ಮಹತ್ವ ಪಡೆದಿದೆ ಎಂದು ಅವರು ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಹೋಗುತ್ತಿರುವಾಗ ಇಲ್ಲಿ ಮಾಡಿದ ಕೆಲಸಗಳು ನೆನಪಿಗೆ ಬರುತ್ತಿವೆ. ಸುಮಾರು ಮೂರು ವರ್ಷಗಳ ಕಾಲ ಬ್ಯಾರಿ ಅಕಾಡೆಮಿಯ ನನ್ನ ಸೇವಾವಧಿ ಸೌಹಾರ್ದದ್ದಾಗಿತ್ತು. ಕೊರೋನಾ ಕಾಲದಲ್ಲಿ ಕಲಾವಿದರಿಗೆ ಕಿಟ್ ಕೊಟ್ಟ, ಬ್ಯಾರಿಗೆ ಲಿಪಿ ತರುವಲ್ಲಿ ಗೆಲುವು ಹಾಗೂ ರಾಜ್ಯದ ಹತ್ತಾರು ಕಡೆ ಬ್ಯಾರಿ ಕಾರ್ಯಕ್ರಮಗಳನ್ನು ನಡೆಸಿದ ವ್ಯವಸ್ಥೆಗಳನ್ನು ಸ್ಮರಿಸಿಕೊಂಡರು.

ಅಕ್ಟೋಬರ್ 3ರಂದು ಬ್ಯಾರಿ ಅಕಾಡೆಮಿ ಘೋಷಣೆ ಆದ ಕಾರಣ ಆ ದಿನವನ್ನು ಕೆಲವು ವರ್ಷಗಳಿಂದ ಬ್ಯಾರಿ ನಾಲಾಚರಣೆಯಾಗಿ ಆಚರಿಸ್ಪಡುತ್ತದೆ.

ವೇದಿಕೆಯಲ್ಲಿ ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಉಪಸ್ಥಿತರಿದ್ದು ಸ್ವಾಗತಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಅಕಾಡೆಮಿ ಸದಸ್ಯೆ ಸುರೇಖಾ ಧನ್ಯವಾದಗೈದರು.

Join Whatsapp