ಬೆಂಗಳೂರು: ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅವಘಡ ಘಟನೆಗೆ ಸಂಬಂಧಿಸಿ ಸ್ಥಳ ಪರಿಶೀಲನೆ ನಡೆಸಿರುವ ಆಮ್ ಆದ್ಮಿ ಪಕ್ಷ, ಇದು ಪೂರ್ವಯೋಜಿತ ಕೃತ್ಯವೆಂದು ಬಲವಾದ ಶಂಕೆ ವ್ಯಕ್ತಪಡಿಸಿದೆ. ಕೋಟ್ಯಂತರ ವ್ಯವಹಾರಗಳ ದಾಖಲೆಗಳನ್ನು ಸಂಗ್ರಹಿಸಿಡಲಾದ ಕೊಠಡಿಗೂ ಬೆಂಕಿ ತಗುಲಿರುವ ಸಾಧ್ಯತೆಯ ಹಿನ್ನೆಲೆ ಈ ಕುರಿತು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದೆ.
ನಗರೋತ್ಥಾನ ಯೋಜನೆಯಡಿ ₹20,000 ಕೋಟಿ ಖರ್ಚು ಮಾಡಲಾಗಿದೆ ಎಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದರು. ಈ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ ಎನ್ನುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲಾ ತರದ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದರು. ತನಿಖೆಯೆಂದರೆ ಸಂಬಂಧಪಟ್ಟ ದಾಖಲೆಗಳಿರುವ ರೆಕಾರ್ಡ್ ರೂಂ ಸುಟ್ಟುಹೋಗುವಂತೆ ಮಾಡುವುದೆ? ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಪ್ರಶ್ನಿಸಿದರು.
ಅವಘಡ ಸಂಭವಿಸಿದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ್ದ ಮೋಹನ್ ದಾಸರಿ, ಬಿಬಿಎಂಪಿ ಮುಖ್ಯ ಕಚೇರಿಯಂತಹ ಪ್ರಮುಖ ಸ್ಥಳದಲ್ಲಿ ಪ್ರಾಥಮಿಕ ಆದ್ಯತೆಯಾಗಿರುವ ಅಗ್ನಿ ಸುರಕ್ಷತೆಯೇ ಇಲ್ಲವೆಂದರೆ, ಗಾಯಗೊಂಡವರನ್ನು ಆ್ಯಂಬುಲೆನ್ಸ್ ವ್ಯವಸ್ಥೆಯಿಲ್ಲದೆ ಹೋಯ್ಸಳ ವಾಹನದಲ್ಲಿ ಕರೆದೊಯ್ದಿದ್ದಾರೆಂದರೆ ಏನು ಅರ್ಥ? ಇದನ್ನೆಲ್ಲ ಗಮನಿಸಿದರೆ ಕೋಟ್ಯಂತರ ಮೌಲ್ಯದ ದಾಖಲೆಗಳನ್ನು ನಾಶ ಮಾಡುವುದಕ್ಕಾಗಿ ನಡೆಸಿರುವ ಪೂರ್ವಯೋಜಿತ ಕೃತ್ಯವೆಂದು ಕಂಡುಬರುತ್ತಿದೆ. ದೊಡ್ಡ ಮಟ್ಟದ ತನಿಖೆಯಾಗಬೇಕು. ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಇದು ಆಕಸ್ಮಿಕವಾಗಿ ನಡೆದ ಅವಘಡವಲ್ಲ ಎಂಬುದು ಸಾಕಷ್ಟು ಲಕ್ಷಣಗಳಿಂದ ಕಂಡುಬರುತ್ತಿದೆ. ಈಗಾಗಲೇ ಗುತ್ತಿಗೆದಾರರು ತಮ್ಮ ಹಣವನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಬಿಬಿಎಂಪಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಆರೋಪಗಳು ಕೇಳಿಬಂದಿವೆ. ಬೆನ್ನಲ್ಲೇ ಕೋಟ್ಯಂತರ ವ್ಯವಹಾರಗಳ ದಾಖಲೆಗಳನ್ನು ಸಂಗ್ರಹಿಸಿಟ್ಟಿರುವ ಕೊಠಡಿಯಿರುವ ಕಟ್ಟಡದಲ್ಲೇ ಅಗ್ನಿ ಅನಾಹುತವಾಗುತ್ತದೆ ಎಂದರೆ ಏನರ್ಥ? ಯಾರೋ ಈ ಕೃತ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲ ಹಗರಣಗಳ ದಾಖಲೆಗಳು ಸಿಗದಂತೆ ಮಾಡುವ ಹುನ್ನಾರ ನಡೆದಿದೆ ಎಂಬುದು ಮೊದಲ ಹಂತದ ಪರಿಶೀಲನೆಯಲ್ಲೇ ಕಂಡುಬರುತ್ತಿದೆ. ದಾಖಲೆ ನಾಶಪಡಿಸುವ ಯತ್ನ ಬಿಬಿಎಂಪಿ ಕಚೇರಿಯಲ್ಲಿ ಹೊಸದೇನಲ್ಲ. ಈ ಹಿಂದೆ ಇದೇ ರೀತಿ ₹2000 ಕೋಟಿ ಹಗರಣದ ದಾಖಲೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದ ಉದಾಹರಣೆಯಿದೆ ಎಂದು ಮೋಹನ್ ದಾಸರಿ ಹೇಳಿದರು.
ಶುಕ್ರವಾರ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಂಡದಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಮಾಧ್ಯಮ ವಕ್ತಾರೆ ಉಷಾ ಮೋಹನ್, ಮುಖಂಡರಾದ ಜಗದೀಶ್ ಬಾಬು, ವಿಶ್ವಾನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಘಟನೆ ವಿವರ: ಶುಕ್ರವಾರ ಸಂಜೆ ಹಡ್ಸನ್ ವೃತ್ತದಲ್ಲಿರುವ ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿರುವ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡಕ್ಕೆ ಬೆಂಕಿ ತಗುಲಿತ್ತು. ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿದ್ದರಿಂದ ದಾಖಲೆಗಳನ್ನು ಸಂಗ್ರಹಿಸಿಟ್ಟಿದ್ದ ಕೊಠಡಿ ಸುಟ್ಟುಹೋಗಿ ಕೋಟ್ಯಂತರ ಮೌಲ್ಯದ ವ್ಯವಹಾರಗಳ ದಾಖಲೆಗಳು ಸುಟ್ಟುಹೋಗಿವೆ ಎನ್ನಲಾಗಿದೆ.