ಪ್ರತಿಬಾರಿ ಗೋಸ್ವಾಮಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗಲೂ ತಕ್ಷಣವೇ ವಿಚಾರಣೆ ಕೈಗೆತ್ತಿಕೊಳ್ಳಲಾಗುತ್ತದೆ ಹೇಗೆ? : ಬಾರ್ ಅಸೋಸಿಯೇಶನ್ ಅಧ್ಯಕ್ಷ ದುಷ್ಯಂತ್ ದವೆ ಪ್ರಶ್ನೆ

Prasthutha|

ನವದೆಹಲಿ : ಇಂಟಿರಿಯರ್ ಡಿಸೈನರ್ ಅನ್ವಯ್ ನಾಯ್ಕ್ ಮತ್ತು ಅವರ ತಾಯಿಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಯ ಜಾಮೀನು ಅರ್ಜಿ, ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಂಡಿರುವುದಕ್ಕೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ದುಷ್ಯಂತ್ ದವೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪ್ರಬಲ ಪ್ರತಿರೋಧ ವ್ಯಕ್ತಪಡಿಸಿ, ಸುಪ್ರೀಂ ಕೊರ್ಟ್ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

ಸಾಮಾನ್ಯ ನಾಗರಿಕ, ಆರೋಪಿಗಳು ವಾರಗಟ್ಟಲೆ, ತಿಂಗಳುಗಟ್ಟಲೆ ಕಾಯಬೇಕಾಗಿರುವಾಗ ಗೋಸ್ವಾಮಿ ಅರ್ಜಿ ತರಾತುರಿ ಹೇಗೆ ವಿಚಾರಣೆಗೆ ಬಂತೆಂದು ದುಷ್ಯಂತ್ ಪ್ರಶ್ನಿಸಿದ್ದಾರೆ.

- Advertisement -

ಗೋಸ್ವಾಮಿಯಂತಹವರು ವಿಶೇಷ ಸವಲತ್ತು ಪಡೆಯುತ್ತಿದ್ದರೆ, ಸಾಮಾನ್ಯ ಭಾರತೀಯರು ಜೈಲು ಶಿಕ್ಷೆಯಿಂದ ಬಳಲುತ್ತಿದ್ದಾರೆ. ಇದು ಕಾನೂನು ಬಾಹಿರ ಮತ್ತು ಅನಧಿಕೃತವಾಗಿದೆ ಎಂದು ದುಷ್ಯಂತ್ ಅಭಿಪ್ರಾಯಪಟ್ಟಿದ್ದಾರೆ.

ಗೋಸ್ವಾಮಿ ಬಗ್ಗೆ ತಮ್ಮದೇನೂ ವೈಯಕ್ತಿಕ ಆಕ್ಷೇಪಗಳಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಅವರಿಗಿರುವ ಹಕ್ಕುಗಳ ಬಗ್ಗೆ ಹಸ್ತಕ್ಷೇಪ ನಡೆಸಲು ಈ ಪತ್ರ ಬರೆಯುತ್ತಿಲ್ಲ. ಎಲ್ಲಾ ನಾಗರಿಕರಂತೆ ಅವರಿಗೂ ಸರ್ವೋಚ್ಛ ನ್ಯಾಯಾಲಯದಿಂದ ನ್ಯಾಯ ಪಡೆಯುವ ಹಕ್ಕು ಇದೆ ಎಂಬುದನ್ನು ದವೆ ಸ್ಪಷ್ಟಪಡಿಸಿದ್ದಾರೆ.

ಆದರೆ, ಗಂಭೀರ ವಿಷಯ ಏನೆಂದರೆ, ತಮ್ಮ ಮುಖ್ಯಸ್ಥಿಕೆಯಲ್ಲಿ ಕಳೆದ ಎಂಟು ತಿಂಗಳಲ್ಲಿ ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲೂ ಆಯ್ದ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ. ಸಾವಿರಾರು ನಾಗರಿಕರು ಜೈಲುಗಳಲ್ಲಿದ್ದರೂ, ಅವರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದ್ದರೂ ವಾರ, ತಿಂಗಳುಗಟ್ಟಲೆ ವಿಚಾರಣೆಗೆ ಬಂದಿಲ್ಲ. ಆದರೆ, ಪ್ರತಿಬಾರಿ ಗೋಸ್ವಾಮಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಅವರ ಅರ್ಜಿ ತಕ್ಷಣವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ ಹೇಗೆ? ಎಂಬುದು ತುಂಬಾ ವಿಚಲಿತಗೊಳಿಸುವ ವಿಷಯ ಎಂದು ದವೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.  

- Advertisement -