ಬಂಟ್ವಾಳ:ಲೋಕಸಭಾ ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ನೌಕರರೊಬ್ಬರು ಮಾ. 27ರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಾರೆ. ಕರ್ತವ್ಯಕ್ಕೂ ಹಾಜರಾಗದೆ, ಮನೆಗೂ ತೆರಳದೆ ನಾಪತ್ತೆಯಾಗಿರುವ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಮ್ಟಾಡಿ ಗ್ರಾ.ಪಂ. ಕಾರ್ಯದರ್ಶಿ, ಬೆಳ್ತಂಗಡಿಯ ಕೊಲ್ಪೆದಬೈಲು ನಿವಾಸಿ ಲಕ್ಷ್ಮೀನಾರಾಯಣ ಕಾಣೆಯಾದ ವ್ಯಕ್ತಿ. ಅವರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಬರುತ್ತಿದ್ದು, ಬಳಿಕ ಮೊಬೈಲ್ ಮತ್ತು ಬೈಕ್ ದೊರಕಿದೆ ಎನ್ನಲಾಗಿದೆ.
ಎಸ್‌ಎಸ್‌ಟಿ ತಂಡದಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮಾ. 27ರಂದು ಮಧ್ಯಾಹ್ನದ ಬಳಿಕ ಕಚೇರಿಯಿಂದ ತೆರಳಿದ್ದಾರೆ. ಆದರೆ ಮನೆಗೆ ಹೋಗಿಲ್ಲ. ಅವರ ಪತ್ನಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗಳಿಗೂ ದೂರು ನೀಡಲಾಗಿದೆ.
ಪ್ರಸ್ತುತ ಅವರ ಬೈಕ್ ಹಾಗೂ ಮೊಬೈಲ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ದು, ಆದರೆ ವ್ಯಕ್ತಿ ಪತ್ತೆಯಾಗಿಲ್ಲ. ಈ ಹಿಂದೆಯೂ ಅವರು ಇದೇ ರೀತಿ ನಾಪತ್ತೆಯಾಗಿ ಬಳಿಕ ಪೊಲೀಸರ ಶೋಧದ ಬಳಿಕ ಪತ್ತೆಯಾಗಿದ್ದರು. ಪ್ರಸ್ತುತ ಪುಂಜಾಲಕಟ್ಟೆ ಪೊಲೀಸರು ಅವರ ಹುಡುಕಾಟದಲ್ಲಿ ತೊಡಗಿದ್ದಾರೆ.