ಅಯೋಧ್ಯೆ: ಫೈಝಾಬಾದ್ ನ ಸಹಂಗಂಜ್ ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ ಡೆಪ್ಯುಟಿ ಮ್ಯಾನೇಜರ್ ಒಬ್ಬರು ಶನಿವಾರ ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಬ್ಬರು ಪೊಲೀಸರ ಹೆಸರು ಡೆತ್ ನೋಟ್ ನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮೃತಪಟ್ಟ 32 ವರ್ಷದ ಶ್ರದ್ಧಾ ಗುಪ್ತಾ 2015 ರಲ್ಲಿ ಕ್ಲರ್ಕ್ ಆಗಿ ಬ್ಯಾಂಕಿಗೆ ಸೇರಿದ್ದರು. ನಂತರ ಬಡ್ತಿ ಪಡೆದು 2018 ರಿಂದ ಫೈಜಾಬಾದ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಅವಿವಾಹಿತರಾಗಿರುವ ಶ್ರದ್ಧಾ ಗುಪ್ತಾ ಅವರು ಲಕ್ನೋದ ರಾಜಾಜಿಪುರಂ ಪ್ರದೇಶದವರಾಗಿದ್ದು, ಕೆಲವೊಮ್ಮೆ ಅವರ ಕುಟುಂಬವನ್ನು ಭೇಟಿಯಾಗುತ್ತಿದ್ದರು ಎಂದು ಅಯೋಧ್ಯೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆ ಮಾಹಿತಿ ನೀಡಿದರು.
ಬೆಳಗ್ಗೆ ಹಾಲಿನ ವ್ಯಾಪಾರಿ ಆಕೆಯ ಕೋಣೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಕೆ ಬಾಗಿಲು ತೆರೆಯದಿದ್ದಾಗ ಪಕ್ಕದ ಕಿಟಕಿಯಿಂದ ಇಣುಕಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಆತ್ಮಹತ್ಯೆ ಪತ್ರ ಲಭಿಸಿದ್ದು, ಅದರಲ್ಲಿ ಆಕೆ ಪೊಲೀಸ್ ಅಧಿಕಾರಿ, ಕಾನ್ಸ್ಟೆಬಲ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ದೂಷಿಸಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ಅವರು ಏನು ಆರೋಪಿಸಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.