ದಿಲ್ಲಿ ವಿಶ್ವ ವಿದ್ಯಾಲಯದ ಹೊಸ ಕಾಲೇಜುಗಳಿಗೆ ಸಾವರ್ಕರ್ , ಸುಷ್ಮಾ ಸ್ವರಾಜ್ ಹೆಸರು

Prasthutha|

ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾನಿಲಯ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಎರಡು ಕಾಲೇಜುಗಳಿಗೆ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದಿರುವ ಸಾವರ್ಕರ್ ಮತ್ತು ಮಾಜಿ ವಿದೇಶಾಂಗ ಸಚಿವೆ ದಿ.ಸುಷ್ಮಾ ಸ್ವರಾಜ್ ಅವರ ಹೆಸರಿಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಿಲ್ಲಿ ವಿಶ್ವ ವಿದ್ಯಾನಿಲಯದ ಕಾರ್ಯನಿರ್ವಹಣಾ ಮಂಡಳಿ ಪ್ರಕಟಿಸಿದೆ.

- Advertisement -

ಕಳೆದ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಎರಡು ಕಾಲೇಜುಗಳಿಗೆ ಹೆಸರು ಆಯ್ಕೆ ಮಾಡುವ ಹೊಣೆಯನ್ನು ಮಂಡಳಿ ಕುಲಪತಿಯವರಿಗೆ ಬಿಟ್ಟಿತ್ತು. ಕಳೆದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಹೆಸರನ್ನು ಅಂತಿಮಪಡಿಸುವ ನಿರ್ಧಾರವನ್ನು ಕುಲಪತಿಗಳಿಗೆ ಬಿಡಲಾಗಿತ್ತು ಎಂದು ಮಂಡಳಿ ಸದಸ್ಯೆ ಸೀಮಾ ದಾಸ್ ಸ್ಪಷ್ಟಪಡಿಸಿದ್ದಾರೆ.

“ಶುಕ್ರವಾರ ನಡೆದ ಸಭೆಯಲ್ಲಿ ಯಾವ ಹೆಸರು ಅಂತಿಮಪಡಿಸಲಾಗಿದೆ ಎಂದು ಕೇಳಿದಾಗ ಕುಲಪತಿ ಮೇಲಿನ ಎರಡು ಹೆಸರು ಅಂತಿಮಪಡಿಸಿದ್ದಾಗಿ ಸಭೆಗೆ ತಿಳಿಸಿದ್ದಾರೆ. ಖ್ಯಾತ ಶಿಕ್ಷಣ ತಜ್ಞರ ಹೆಸರನ್ನು ಕಾಲೇಜಿಗೆ ಇಡುವಂತೆ ನಾವು ಈ ಹಿಂದೆ ಸಲಹೆ ಮಾಡಿದ್ದೆವು. ಆದರೆ ಅದು ಆಗಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.ಪ್ರಸ್ತಾವಿಸಿದ್ದ ಹೆಸರುಗಳ ಪಟ್ಟಿಯಲ್ಲಿ ಸ್ವಾಮಿ ವಿವೇಕಾನಂದ, ವಲ್ಲಭಬಾಯಿ ಪಟೇಲ್, ಅಟಲ್‌ ಬಿಹಾರಿ ವಾಜಪೇಯಿ, ಸಾವಿತ್ರಿಬಾಯಿ ಫುಲೆ ಮತ್ತಿತರರ ಹೆಸರುಗಳಿದ್ದವು ಎಂದು ಹೇಳಿದ್ದಾರೆ.

Join Whatsapp