ಏಷ್ಯಾ ಕಪ್‌ | ಶ್ರೀಲಂಕಾ ಗೆಲುವಿಗೆ 184 ರನ್‌ ಗುರಿ ನೀಡಿದ ಬಾಂಗ್ಲಾದೇಶ

Prasthutha|

ಏಷ್ಯಾಕಪ್‌ ಟಿ20 ಟೂರ್ನಿಯʻ ಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿಗೆ ಬಾಂಗ್ಲಾದೇಶ ತಂಡ 184ರನ್‌ಗಳ ಗುರಿ ನೀಡಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 7 ವಿಕೆಟ್‌ ನಷ್ಟದಲ್ಲಿ 183 ರನ್‌ಗಳಿಸಿದೆ.  

- Advertisement -

ಆರಂಭಿಕ ಮೆಹ್ದಿ ಹಸನ್ ಮಿರಾಝ್‌ (38 ರನ್‌), ನಾಯಕ  ಶಾಕಿಬ್ ಅಲ್ ಹಸನ್ (24 ರನ್‌),  ಅಫೀಫ್ ಹುಸೇನ್ (39 ರನ್‌) ಮಹ್ಮೂದುಲ್ಲಾ(27 ರನ್‌), ಹಾಗೂ ಮೊಸದ್ದೆಕ್ ಹುಸೈನ್ 24 ರನ್‌ ಗಳಿಸುವ ಮೂಲಕ  ತಂಡವು ಸ್ಪರ್ಧಾತ್ಮ ಮೊತ್ತ ಕಲೆಹಾಕುವಲ್ಲಿ ನೆರವಾದರು. ಅದರಲ್ಲೂ ಕೊನೆ ಕ್ಷಣದಲ್ಲಿ ಅಬ್ಬರಿಸಿದ ಮೊಸದ್ದೆಕ್ ಹುಸೈನ್, ಕೇವಲ 9 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 24 ರನ್‌ಗಳಿಸಿ ಅಜೇಯರಾಗುಳಿದರು.

ಶ್ರೀಲಂಕಾ ಪರ ಬೌಲಿಂಗ್‌ನಲ್ಲಿ ವನಿಂದು ಹಸರಂಗ ಮತ್ತು ಚಾಮಿಕ ಕರುಣಾರತ್ನೆ ತಲಾ ಎರಡು ವಿಕೆಟ್‌ ಪಡೆದರೆ, ಉಳಿದ ಮೂವರು ಬೌಲರ್‌ಗಳು ತಲಾ ಒಂದು ವಿಕೆಟ್‌ ಪಡೆದರು.

- Advertisement -

ಏಷ್ಯಾ ಕಪ್‌ ಟೂರ್ನಿಯ ಬಿ ಗುಂಪಿನಿಂದ ಈಗಾಗಲೇ ಅಫ್ಘಾನಿಸ್ತಾನ ಸೂಪರ್‌-4 ಹಂತಕ್ಕೆ ತೇರ್ಗಡೆಯಾಗಿದ್ದು, ಉಳಿದಿರುವ ಒಂದು ಸ್ಥಾನಕ್ಕಾಗಿ ಲಂಕಾ-ಬಾಂಗ್ಲಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಭಯ ತಂಡಗಳು ಗುರುವಾರದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ.

ಬುಧವಾರ ನಡೆದ ಪಂದ್ಯದಲ್ಲಿ ಹಾಂಕಾಂಗ್‌ ತಂಡವನ್ನು 40 ರನ್‌ಗಳ ಅಂತರದಲ್ಲಿ ಮಣಿಸಿದ್ದ ಟೀಮ್‌ ಇಂಡಿಯಾ ಸೂಪರ್‌-4 ಹಂತಕ್ಕೆ ಪ್ರವೇಶ ಪಡೆದಿದೆ. ಸೆಪ್ಟಂಬರ್‌ 2 ಶುಕ್ರವಾರದಂದು ನಡೆಯುವ ಪಾಕಿಸ್ತಾನ-ಹಾಂಕಾಂಗ್‌ ಪಂದ್ಯದ ವಿಜೇತರು ಎರಡನೇ ತಂಡವಾಗಿ ಸೂಪರ್‌-4 ಹಂತಕ್ಕೆ ಅವಕಾಶ ಪಡೆಯಲಿದ್ದಾರೆ.

ಸೆಪ್ಟಂಬರ್‌ 4ರಿಂದ ಸೂಪರ್‌-4 ಹಂತದ ಪಂದ್ಯಗಳು ನಡೆಯಲಿದ್ದು, ಸೆಪ್ಟಂಬರ್‌ 11ರಂದು ಫೈನಲ್‌ ಪಂದ್ಯ ನಡೆಯಲಿದೆ.



Join Whatsapp