ಬೆಂಗಳೂರು: ಮಾಗಡಿ ತಾಲೂಕಿನ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಸಂಬಂಧ ಬಸವೇಶ್ವರ ನಗರದ ವೀರಶೈವ ಲಿಂಗಾಯತ ಮುಖಂಡರೊಬ್ಬರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ನಲ್ಲಿ ವೀರಶೈವ ಲಿಂಗಾಯತ ಮುಖಂಡ ಸಚ್ಚಿದಾನಂದ ಮೂರ್ತಿ ಹೆಸರು ಉಲ್ಲೇಖ ಆಗಿದ್ದರಿಂದ ಮಾಗಡಿ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದಾರೆ.
ಸಚ್ಚಿದಾನಂದ ಮೂರ್ತಿಯಿಂದಲೂ ಅಪಪ್ರಚಾರ ಎಂದು ಬಸವಲಿಂಗ ಶ್ರೀಗಳು ಬರೆದಿದ್ದರು. ಹೆಸರು ಪ್ರಸ್ತಾಪ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ವಿಚಾರಣೆ ನಡೆಸಲಾಗುತ್ತದೆ.
ಪ್ರಕರಣ ಸಂಬಂಧ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಚಾರಣೆಯ ವೇಳೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಡೆತ್ ನೋಟ್ ನಲ್ಲಿ ಇಬ್ಬರು ಶ್ರೀಗಳಿಂದ ತೊಂದರೆ ಆಗುತ್ತಿದೆ ಎಂದು ಬಸವಲಿಂಗ ಶ್ರೀ ಉಲ್ಲೇಖಿಸಿದ್ದಾರೆ. ಇದನ್ನು ಬೆನ್ನತ್ತಿರುವ ಪೊಲೀಸರು, “ಆ ಮತ್ತೊಬ್ಬ” ಪ್ರತಿಷ್ಠಿತ ಮಠದ ಶ್ರೀಗೂ ಬಲೆ ಬೀಸಿದ್ದಾರೆ. ಬಂಧಿತ ಮೂವರು ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಶ್ಚರ್ಯಕರ ವಿಚಾರಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಬಸವಲಿಂಗ ಶ್ರೀಗೆ ಕಿರುಕುಳ ನೀಡಿದ್ದ ಆ ಮತ್ತೊಂದು ಮಠದ ಸ್ವಾಮೀಜಿ ಯಾರು..? ಬಂಡೇಮಠಕ್ಕೂ ಆ ಮತ್ತೊಬ್ಬ ಸ್ವಾಮೀಜಿಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಉದ್ಭವಿಸಿವೆ.