ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳನ್ನು ಒಟ್ಟುಗೂಡಿಸಿರುವುದು ಅವರ ಶ್ರಮ ಮತ್ತು ಹಸಿವೇ ವಿನಃ ಧರ್ಮ ಜಾತಿಯಲ್ಲ. ಆದ್ದರಿಂದ ಧರ್ಮದ ಹೆಸರಿನಲ್ಲಿ ವ್ಯಾಪಾರಿಗಳ ಮೇಲಿನ ನಿಷೇಧವನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಬಹಿಷ್ಕಾರಗಳಿಗೆ ಯಾರು ಕೂಡ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹೇಳಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟ, ವಿವಿ ಪುರಂ ಸುಬ್ರಹ್ಮಣ್ಯ ದೇವಾಲಯದಲ್ಲಿ ಮುಸ್ಲಿಂ ವ್ಯಾಪಾರಿಗಳ ನಿರ್ಬಂಧಕ್ಕೆ ಹಿಂದೂ ಸಂಘಟನೆ ಕರೆ ನೀಡಿರುವುದು ಸರಿಯಲ್ಲ. ವ್ಯಾಪಾರ ವಿರೋಧದ ಹೆಸರಲ್ಲಿ ಧರ್ಮವನ್ನು ದುರಪಯೋಗ ಪಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ಹೇಳಿದೆ.
ಇಂತಹ ನೀಚ ನಡೆಗಳು ಬೀದಿ ವ್ಯಾಪಾರಿಗಳಲ್ಲಿ ಭಯವನ್ನು ಉಂಟು ಮಾಡಿ, ಜೀವನೋಪಾಯ ಕಸಿದುಹೋಗುವ ಭಯದಲ್ಲಿ ಜೀವಿಸುವಂತಾಗಿದೆ. ಧರ್ಮದ ಹೆಸರಿನಲ್ಲಿ ಈ ರೀತಿ ವ್ಯಾಪಾರ ಬಹಿಷ್ಕಾರ ಹಾಕುವುದು ಸಂವಿಧಾನವನ್ನು ವಿರೋಧ ಮಾಡಿದಂತೆ ಸರ್ಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು. ಧರ್ಮದ ಹೆಸರಿನಲ್ಲಿ ಸಂವಿಧಾನ ವಿರೋಧಿ ಕೆಲಸ ಮಾಡುವವರನ್ನ ಕೂಡಲೇ ಬಂಧಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.