‘ಆಶ್ರಮ್’ ಶೂಟಿಂಗ್ ಸೆಟ್ ನಲ್ಲಿ ಬಜರಂಗದಳ ಗೂಂಡಾಗಿರಿ | ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ ಬಳಿದ ಕಾರ್ಯಕರ್ತರು

Prasthutha|

ಭೋಪಾಲ್ : ಖ್ಯಾತ ಬಾಲಿವುಡ್ ನಟ ಬಾಬಿ ಡಿಯೋಲ್ ಅಭಿನಯಿಸುತ್ತಿರುವ ‘ಆಶ್ರಮ್ 3’ ಹಿಂದಿ ವೆಬ್ ಸಿರೀಸಿನ ಶೂಟಿಂಗ್ ಸೆಟ್ ಗೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿರುವ ಬಜರಂಗದಳ ಕಾರ್ಯಕರ್ತರು ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿ ಬಳಿದಿದ್ದಾರೆ. ಅಲ್ಲದೇ ವೆಬ್ ಸಿರೀಸ್ ತಂಡದ ಸಿಬ್ಬಂದಿ ಮೇಲೆ ಮನಬಂದಂತೆ ಥಳಿಸಿದ್ದಾರೆ. ಸದ್ಯ ಬಜರಂಗದಳ ಕಾರ್ಯಕರ್ತರು ನಡೆಸಿರುವ ದಾಂಧಲೆ ದೃಶ್ಯ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಭೋಪಾಲ್ ನಲ್ಲಿ ನಡೆಯುತ್ತಿರುವ ‘ಆಶ್ರಮ್ 3’ ಶೂಟಿಂಗ್ ವೇಳೆ ಚಿತ್ರೀಕರಣಕ್ಕಾಗಿ ಹಳೇ ಜೈಲಿನಲ್ಲಿ ಕೆಲವು ಸೆಟ್ಗಳನ್ನು ಹಾಕಲಾಗಿತ್ತು. ಈ ಸಂದರ್ಭ ಸ್ಥಳಕ್ಕೆ ಬಂದಿರುವ ಭಜರಂಗದಳದ ಕಾರ್ಯಕರ್ತರು ವೆಬ್ ಸಿರೀಸ್ ತಂಡದ ಸಿಬ್ಬಂದಿಯನ್ನು ಮನಬಂದಂತೆ ಥಳಿಸಿದ್ದಾರೆ. ಶೂಟಿಂಗ್ ಉಪಕರಣಗಳಿಗೆ ಹಾನಿ ಮಾಡಿದ್ದಾರೆ. ನಿರ್ದೇಶಕ ಪ್ರಕಾಶ್ ಝಾ ಮುಖಕ್ಕೆ ಮಸಿಯನ್ನೂ ಬಳಿದಿದ್ದಾರೆ.

ಆಕ್ರೋಶಕ್ಕೆ ಕಾರಣವೇನು?
ಆಶ್ರಮ್ ಎಂದು ‘ಈ ವೆಬ್ ಸರಣಿಗೆ ಹೆಸರಿಟ್ಟು, ಆಶ್ರಮದ ಗುರುಗಳು ಮಹಿಳೆಯರನ್ನು ಶೋಷಿಸುವ ದೃಶ್ಯಗಳನ್ನು ಪ್ರದರ್ಶಿಸಲಾಗಿದೆ. ಚರ್ಚ್ ಅಥವಾ ಮದರಾಸ ಬಗ್ಗೆ ಇದೇ ರೀತಿ ತೋರಿಸುವ ಧೈರ್ಯ ಇವರಲ್ಲಿ ಇದೆಯೇ? ಬಜರಂಗದಳದ ಮುಖಂಡ ಸುಶೀಲ್ ಪ್ರಶ್ನಿಸಿದ್ದಾರೆ. ‘ಆಶ್ರಮ್ 1’ ಮತ್ತು ‘ಆಶ್ರಮ್ 2’ ಬಳಿಕ ಈಗ ‘ಆಶ್ರಮ್ 3’ ಮಾಡುತ್ತಿದ್ದಾರೆ. ಇದನ್ನು ಚಿತ್ರೀಕರಿಸಲು ನಾವು ಬಿಡಲ್ಲ ಎಂದು ಸುಶೀಲ್ ಇದೇ ವೇಳೆ ತಿಳಿಸಿದ್ದಾರೆ.

- Advertisement -

ಸದ್ಯ ಕಾರ್ಯಕರ್ತರು ನಡೆಸಿರುವ ಹಲ್ಲೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಚಿತ್ರ ತಂಡಕ್ಕೆ ಸೂಕ್ತ ಭದ್ರತೆ ಒದಗಿಸಿ ಚಿತ್ರೀಕರಣ ನಡೆಸಲು ಅವಕಾಶ ನೀಡುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.

Join Whatsapp