ಮಧ್ಯಪ್ರದೇಶ: ವಿದ್ಯಾರ್ಥಿಗಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ನೆಪವೊಡ್ಡಿ ಬಜರಂಗದಳ ಸಂಘಟನೆಯ ಕಾರ್ಯಕರ್ತರು ವಿಧಿಶಾ ಜಿಲ್ಲೆಯ ಸಂತ ಜೋಸೆಫ್ ಶಾಲೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಶಾಲೆಯ ಗಾಜುಗಳು ಪುಡಿ ಪುಡಿಯಾಗಿವೆ. ಸಂತ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ವೇಳೆಯೇ ಬಜರಂಗದಳ ಕಾರ್ಯಕರ್ತರು ಮತಾಂತರದ ಆರೋಪ ಹೊರಿಸಿ ದಾಳಿ ನಡೆಸಿದ್ದಾರೆ.
ಸಂತ ಜೋಸೆಫ್ ಶಾಲೆಯ 8 ವಿದ್ಯಾರ್ಥಿಗಳನ್ನು ಮತಾಂತರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದ ಸುದ್ದಿಯನ್ನೇ ನೆಪವಾಗಿಸಿದ ಬಲಪಂಥೀಯ ಕಾರ್ಯಕರ್ತರು ಶಾಲೆಯ ಆವರಣದಲ್ಲಿ ಗದ್ದಲ ಸೃಷ್ಟಿಸಿದ್ದಾರೆ. ಅಲ್ಲದೇ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಸದ್ಯ ಕಾರ್ಯಕರ್ತರು ಮಕ್ಕಳ ಪರೀಕ್ಷೆಯ ವೇಳೆಯೂ ಅಡ್ಡಿ ಪಡಿಸಿ ದಾಂಧಲೆ ನಡೆಸಿರುವ ದೃಶ್ಯಾವಳಿಗಳು ವೈರಲ್ ಆಗಿದೆ.
ದುಷ್ಕರ್ಮಿಗಳು ಶಾಲಾ ಕಿಟಕಿಗಳ ಮೇಲೆ ಕಲ್ಲಿನಿಂದ ದಾಳಿ ನಡೆಸಿದರ ಪರಿಣಾಮ ವಿದ್ಯಾರ್ಥಿಗಳು ಭಯಭೀತಗೊಂಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯೊಬ್ಬ “ಪರೀಕ್ಷೆಯ ವೇಳೆ ದಾಳಿ ನಡೆದಿದ್ದರಿಂದ ನಮಗೆ ಏಕಾಗ್ರತೆ ಇಲ್ಲದಾಗಿದೆ, ಪರೀಕ್ಷೆಯನ್ನು ಪುನರ್ ನಡೆಸಬೇಕೆಂದು ನಾವು ಬಯಸುತ್ತೇವೆ” ಎಂದು ಶಿಕ್ಷಕರ ಬಳಿ ವಿನಂತಿಸಿದ್ದಾನೆ.
ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರ ಮತಾಂತರ ಆರೋಪವನ್ನು ಅಲ್ಲಗಳೆದಿರುವ ಶಾಲಾ ಆಡಳಿತ ಮಂಡಳಿ, ದಾಳಿಕೋರರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾದ ಯಾವುದೇ ಹೆಸರುಗಳು ಯಾವುದೇ ವಿದ್ಯಾರ್ಥಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು ವಿಧ್ವಂಸಕ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.