ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಸುನಿಲ್ ಮೇಲೆ ತಲವಾರು ದಾಳಿ ಯತ್ನಕ್ಕೆ ಕಾರಣ ಏನು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಸಮೀರ್’ನ ಸಹೋದರಿಗೆ ಸುನಿಲ್ ಚುಡಾಯಿಸುತ್ತಿದ್ದುದೇ ಆತನ ಮೇಲೆ ತಲವಾರು ದಾಳಿ ನಡೆಯಲು ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಜರಂಗದಳದ ಕಾರ್ಯಕರ್ತ ಸುನಿಲ್ ಕಳೆದ ನಾಲ್ಕೈದು ತಿಂಗಳುಗಳಿಂದ ಸಮೀರ್ ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ. ನಡೆದುಕೊಂಡು ಹೋಗುತ್ತಿದ್ದಾಗ ಚುಡಾಯಿಸುತ್ತಿದ್ದ. ಈ ವಿಷಯದಲ್ಲಿ ಸಮೀರ್ ಮತ್ತು ಸುನಿಲ್ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು. ತಂಗಿಯ ವಿಷಯಕ್ಕೆ ಬಾರದಂತೆ ಸುನಿಲ್ ಗೆ ಸಮೀರ್ ಎಚ್ಚರಿಕೆಯನ್ನೂ ನೀಡಿದ್ದ ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ.
ಸುನಿಲ್ ಮೇಲೆ ನಡೆದ ದಾಳಿ ವೈಯಕ್ತಿಕ ದ್ವೇಷದಿಂದ ನಡೆದಿದೆ. ಸಮೀರ್ ನ ತಂಗಿಯ ಮೊಬೈಲ್ ಸಂಖ್ಯೆಯನ್ನು ಸುನಿಲ್ ಕೇಳಿದ್ದ. ಈ ವಿಷಯದಲ್ಲಿ ಅವರಿಬ್ಬರು ಬಯ್ದಾಡಿಕೊಂಡಿದ್ದರು. ಘಟನೆಯ ದಿನ ಸಮೀರ್ ಮೇಕೆಗೆ ಹುಲ್ಲು ತರಲು ಗದ್ದೆಗೆ ಹೊರಟಿದ್ದು, ಇದೇ ಮಚ್ಚಿನಿಂದ ಸುನೀಲ್ ಮೇಲೆ ಬೀಸಿದ್ದಾನೆ ಎಂದು ಮಿಥುನ್ ತಿಳಿಸಿದರು.
ಆದರೆ ಸುನಿಲ್ ನ ಕಿರುಕುಳ ಹೆಚ್ಚಾಗಿದ್ದರಿಂದ ಸಮೀರ್ ಕಳೆದ ಭಾನುವಾರ ರಾತ್ರಿ ಬಿ.ಎಚ್.ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸುನೀಲ್ ಗೆ ತಲವಾರು ದಾಳಿ ನಡೆಸಲು ಯತ್ನಿಸಿದ್ದು, ಆದರೆ ಗುರಿ ತಪ್ಪಿದ್ದರಿಂದ ಸುನಿಲ್ ಬಚಾವಾಗಿದ್ದಾನೆ.
ಸಾಗರ ನಗರ ಬಜರಂಗದಳದ ಸಹ ಸಂಚಾಲಕನಾಗಿರುವ ಸುನಿಲ್ ಮೇಲಿನ ದಾಳಿಯನ್ನು ಖಂಡಿಸಿ ಮಂಗಳವಾರ ಸಾಗರ ಪಟ್ಟಣದಲ್ಲಿ ಬಜರಂಗದಳ ಬಂದ್ ಗೆ ಕರೆ ನೀಡಿದೆ.