ಕೊಪ್ಪಳ: ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಬ್ಯಾನ್ ಮಾಡಿದ್ರೆ ಸಮಸ್ಯೆಗೆ ಪರಿಹಾರ ಆಗುತ್ತಾ? ಎರಡೂ ಪಕ್ಷಗಳು ಈ ಬಗ್ಗೆ ಯೋಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳದಲ್ಲಿ ಅಮಯಾಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರ ಮನಸ್ಸು ಕೆಡಿಸಿ ಹಾಳು ಮಾಡಲಾಗುತ್ತಿದೆ. ಅವರ ತಲೆಯಲ್ಲಿ ಏನೆನೋ ತುಂಬಿ ಅವರನ್ನ ಹಾಳು ಮಾಡುತ್ತಿದ್ದಾರೆ. ಅಮಾಯಕರನ್ನು ಚಿತಾವಣೆ ಮಾಡೋರನ್ನು ಮೊದಲು ಮಟ್ಟಹಾಕಬೇಕು. ಅದು ಬಿಟ್ಟು ಬ್ಯಾನ್ ಮಾಡ್ತಿನಿ ಅಂದ್ರೆ ಉಪಯೋಗ ಏನು? ಕಾಂಗ್ರೆಸ್ ನವರು ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಇವರು ಯಾಕೆ ಬ್ಯಾನ್ ಮಾಡಲಿಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
ರಾಜ್ಯದ ಜನರು ನೆರೆ, ಬರ ಇನ್ನಿತರೆ ಕಷರಗಲ್ಲಿ ಇದ್ದಾಗ ಬಾರದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ಬಂದು ರೋಡ್ ಶೋ ಮಾಡಿ ಕೈಬೀಸಿ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.
ಚುನಾವಣೆ ಬಂದಿದೆ. ಬಿಜೆಪಿಯ ದೆಹಲಿ ನಾಯಕರು ರಾಜ್ಯಕ್ಕೆ ಲಗ್ಗೆ ಇಡ್ತಿದ್ದಾರೆ. ಇವರು ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಅವರು ಬರಬೇಕಾಗಿತ್ತು. ಇವಾಗ ಬಂದು ಮೋದಿಯವರು ರೋಡ್ ಶೋ ಮೂಲಕ ಜನರತ್ತ ಕೈ ಬೀಸುತ್ತಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ಕಲ್ಯಾಣಕ ಕರ್ನಾಟಕಕ್ಕೆ ಬಿಜೆಪಿಯ ಕೊಡುಗೆ ಏನು? ಕೃಷ್ಣಾ ನ್ಯಾಯಧಿಕರಣದ ತೀರ್ಪು ಬಂದು ಹತ್ತು ವರ್ಷ ಆಯಿತು. ಈ ಭಾಗಕ್ಕೆ, ಮುಖ್ಯವಾಗಿ ನೀರಾವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಏನು ಮಾಡಿವೆ? ಜೆಡಿಎಸ್, ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿವೆ ಅಂತಾರೆ ಮೋದಿ ಅವರು. ಹಾಗಾದರೆ, ಅವರು ರೈತರಿಗೆ ಎನ್ ಮಾಡಿದ್ದಾರೆ ಎಂದು ಹೇಳಬೇಕಲ್ಲವೆ? ಅವರ ಫಸಲ್ ಭಿಮಾ ಯೋಜನೆಯ ಪ್ರೀಮಿಯಂ ಹಣವನ್ನೆ ಕೊಡಲಿಲ್ಲ. ಆ ಯೋಜನೆ ಮೋಸದ ಬಗ್ಗೆ ಇಡೀ ದೇಶದ ಉದ್ದಗಲಕ್ಕೂ ಚರ್ಚೆ ಆಗ್ತಿದೆ. ಇದಕ್ಕೆ ಮೋದಿ ಉತ್ತರ ಏನು ಎಂದು ಅವರು ಕೇಳಿದರು.