ಕಾರ್ಕಳ | ದನ ಸಾಗಾಟದ ಆರೋಪ । ಕಾರು ಧ್ವಂಸಗೊಳಿಸಿ ಹಲ್ಲೆ ನಡೆಸಿದ್ದ ಬಜರಂಗದಳದಿಂದ ಮತ್ತೆ ಯುವಕನ ಮೇಲೆ ಮಾರಣಾಂತಿಕ ದಾಳಿ

Prasthutha|


ಕಾರ್ಕಳ : ದನ ಸಾಗಾಟದ ಆರೋಪ ಹೊರಿಸಿ ಉಡುಪಿ ಜಿಲ್ಲೆಯ ಕಾರ್ಕಳದ ಈದು ಗ್ರಾಮದಲ್ಲಿ ಕಳೆದ ತಿಂಗಳು ಆದಿವಾಸಿ ಸಮುದಾಯದ ಸೀತಾರಾಮ ಮಲೆಕುಡಿಯ ಎಂಬವರಿಗೆ ಬಿಜೆಪಿ ಪರ ಸಂಘಟನೆ ‘ಬಜರಂಗ ದಳ’ದ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿತ್ತು. ಇದೀಗ ಸೀತಾರಾಮ ಮಲೆಕುಡಿಯರೊಂದಿಗೆ ಕೆಲಸ ಮಾಡುತ್ತಿರುವ ಸುಜಯ್ ದೇವಾಡಿಗ (30) ಎಂಬವರಿಗೆ ಅದೇ ತಂಡ ತೀವ್ರವಾಗಿ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

- Advertisement -

ಸುಜಯ್ ದೇವಾಡಿಗ ತನ್ನ ಮನೆ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ಬಜರಂಗ ದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಬಜರಂಗ ದಳದ ಕಾರ್ಯಕರ್ತರಾದ ಯೋಗೀಶ್ ಯಾನೆ ಮುನ್ನಾ, ರವಿ ಆಚಾರ್ಯ, ಅಶೋಕ್ ಯಾನೆ ಅಭಿ, ನಿತಿನ್ ಹಾಗೂ ಇತರ 17 ಮಂದಿ ಸುಜಯ್ ದೇವಾಡಿಗ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ
ಹಲ್ಲೆಯಿಂದ ಗಾಯಗೊಂಡಿರುವ ಸುಜಯ್ ದೇವಾಡಿಗ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕಳೆದ ಜು, 22ರಂದು ಈದು ಗ್ರಾಮದ ಜಂಗೊಟ್ಟು ಕಾಲನಿಯ ಸೀತಾರಾಮ ಮಲೆಕುಡಿಯ ಅವರು ಹೈನುಗಾರಿಕೆಗೆಂದು ಬಾಬು ಪೂಜಾರಿ ಎಂಬವರಿಂದ ಹಸುವೊಂದನ್ನು ಖರೀದಿಸಿ ತಂದಿದ್ದರು. ಅದನ್ನು ಬಾಬು ಪೂಜಾರಿ ಮತ್ತು ಸುಜಯ್ ದೇವಾಡಿಗ ಅವರು ಸೀತಾರಾಮ ಮಲೆಕುಡಿಯರ ಮನೆಯ ಹಟ್ಟಿಗೆ ತಂದು ಕಟ್ಟಿದ್ದರು. ಅದೇ ದಿನ ಸಂಜೆ ಬಕ್ರೀದ್ ಹಬ್ಬಕ್ಕಾಗಿ ಆಡು ಖರೀದಿಸಲು ಬಂದ ಅಬ್ದುಲ್ ರಹ್ಮಾನ್ ಅವರ ಕಾರನ್ನು ತಡೆದ ಬಜರಂಗ ದಳದ ಕಾರ್ಯಕರ್ತರು, ಕಾರನ್ನು ಧ್ವಂಸಗೊಳಿಸಿದ್ದರು ಎಂದು ಹೇಳಲಾಗಿತ್ತು. ಅದೇ ದಿನ ಮಧ್ಯರಾತ್ರಿ 50ಕ್ಕೂ ಹೆಚ್ಚು ಬಜರಂಗ ದಳದ ಕಾರ್ಯಕರ್ತರು ಸೀತಾರಾಮ ಮಲೆಕುಡಿಯರ ಮನೆಗೆ ನುಗ್ಗಿ, ಪೊಲೀಸರ ಸಮ್ಮುಖದಲ್ಲೇ ಅವರನ್ನು ಅರೆ ನಗ್ನಗೊಳಿಸಿ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

- Advertisement -

ಆ ಸಮಯ ಸುಜಯ್ ದೇವಾಡಿಗ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ. ಸುಜಯ್ ಕೂಡ ಇವರೊಂದಿಗೆ ಭಾಗಿಯಾಗಿದ್ದಾರೆಂದು ಆರೋಪಿಸಿ ಅದೇ ತಂಡ ಈಗ ಹಲ್ಲೆ ನಡೆಸಿದೆ ಎಂದು ಸುಜಯ್ ಸಹೋದರ ಉದಯ ದೇವಾಡಿಗ ಆರೋಪಿಸಿದ್ದಾರೆ

Join Whatsapp