ನವದೆಹಲಿ: ಕೇಂದ್ರ ಸರ್ಕಾರ PFI ಮೇಲೆ ಹೇರಿದ್ದ ನಿಷೇಧಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ ಎಂಟು ಮಂದಿ ಕಾರ್ಯಕರ್ತರಿಗೆ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ದೆಹಲಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಸೆಪ್ಟೆಂಬರ್ 27ರಿಂದ ಕಸ್ಟಡಿಯಲ್ಲಿದ್ದಾಗ ಮತ್ತು ಅಕ್ಟೋಬರ್ 4ರವರೆಗೆ ತಿಹಾರ್ ಜೈಲಿನಲ್ಲಿದ್ದಾಗ ಆರೋಪಿಗಳು ಹೇಗೆ ಕಾನೂನುಬಾಹಿರ ಚಟುವಟಿಕೆ ನಡೆಸಿದರು ಎಂದು ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿದೆ.
PFI ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸುವ ಮೊದಲೇ ಆರೋಪಿಗಳು ಮುಂಜಾಗ್ರತಾ ಕ್ರಮವಾಗಿ ಕಸ್ಟಡಿಯಲ್ಲಿದ್ದರು ಮತ್ತು ತಿಹಾರ್ ಜೈಲಿನಿಂದ ಬಿಡುಗಡೆಯಾದ ಕೂಡಲೇ ಅವರನ್ನು ಬಂಧಿಸಲಾಯಿತು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜಯ್ ಖಾನಗ್ವಾ ಹೇಳಿದರು.
ಈ ಪ್ರಕರಣದಲ್ಲಿ ಮುಸ್ಲಿಮ್ ಯುವಕರಾದ ಮುಹಮ್ಮದ್ ಶುಹೈಬ್, ಅಬ್ದುಲ್ ರಬ್, ಹಬೀಬ್ ಅಸ್ಗರ್ ಜಮಾಲಿ, ಮುಹಮ್ಮದ್ ವಾರಿಸ್ ಖಾನ್, ಅಬ್ದುಲ್ಲಾ, ಶೇಖ್ ಗುಲ್ಫಾಮ್ ಹುಸೇನ್, ಮುಹಮ್ಮದ್ ಶುಹೈಬ್ ಮತ್ತು ಮೊಹ್ಸಿನ್ ವಕಾರ್ ಎಂಬವರನ್ನು ಐಪಿಸಿ ಸೆಕ್ಷನ್ 107 ಅಡಿಯಲ್ಲಿ ಸೆಪ್ಟೆಂಬರ್ 27ರಂದು ಬಂಧಿಸಲಾಗಿತ್ತು.
ಈ ಮಧ್ಯೆ ಬಿಡುಗಡೆಗೊಂಡ ಕೂಡಲೇ ಮತ್ತೆ ಅವರನ್ನು ಬಂಧಿಸಲಾಗಿದ್ದು, ಸೆಪ್ಟೆಂಬರ್ 29ರಂದು ಶಾಹೀನ್ ಬಾಗ್ ಪೊಲೀಸ್ ಠಾಣೆಯಲ್ಲಿ UAPA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಂಧಿತರಿಂದ ಪಿ.ಎಫ್.ಐ ಝಿಂದಾಬಾದ್ ಎಂದು ಬರೆದಿರುವ ಕರಪತ್ರ, ಪಿ.ಎಫ್.ಐ ಧ್ವಜಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಕೋರ್ಟ್ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದೆಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆರೋಪಿಗಳ ಕಾಲ್ ಡಿಟೈಲ್ ದಾಖಲೆಗಳನ್ನು ವಿಶ್ಲೇಷಿಸಬೇಕು ಎಂಬ ದೆಹಲಿ ಪೊಲೀಸರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಅವರು ಈಗಾಗಲೇ ತನಿಖಾಧಿಕಾರಿಯ ವಶದಲ್ಲಿದ್ದಾರೆ ಮತ್ತು ಅದರಿಂದಲೂ ಸಹ, ಆರೋಪಿಗಳು ಪಿಎಫ್’ಐ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿದ ದಿನಾಂಕದಿಂದ ಪ್ರಸ್ತುತ ಪ್ರಕರಣದಲ್ಲಿ ಅವರನ್ನು ಬಂಧಿಸುವವರೆಗೂ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಸಾಬೀತುಪಡಿಸಲು ಬೇಕಾದ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಹೇಳಿದೆ.