ಕೋಮು ಉನ್ಮಾದದಿಂದಾಗಿ ಇಂದೋರ್’ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಅಡ್ಡಿ: ಸುಪ್ರೀಂ ಕೋರ್ಟ್ಗೆ ಮುಸ್ಲಿಂ ವಕೀಲೆ ದೂರು

Prasthutha|

ಇಂದೋರ್: ಮಧ್ಯಪ್ರದೇಶದ ಇಂದೋರ್‌ ನಗರದಲ್ಲಿ ಕೋಮು ಉನ್ಮಾದ ಇರುವ ಕಾರಣಕ್ಕೆ ತಮ್ಮ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಓರ್ವ ಮುಸ್ಲಿಂ ವಕೀಲೆ ಹಾಗೂ ಆಕೆಯ ಇಂಟರ್ನ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಪ್ರಕರಣವನ್ನು ಮಾರ್ಚ್ 20ರಂದು ಕೈಗೆತ್ತಿಕೊಳ್ಳಲಿದೆ.
ತಮ್ಮ ವಿರುದ್ಧ ಮಾಡಲಾದ ಆರೋಪ ಆಧಾರ ರಹಿತವಾಗಿವೆ ಎಂದು ಇಂದೋರ್‌ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲೆ ನೂರ್‌ ಜಹಾನ್‌ ಹಾಗೂ 23 ವರ್ಷದ ಆಕೆಯ ಇಂಟರ್ನ್‌ ಅಳಲು ತೋಡಿಕೊಂಡಿದ್ದಾರೆ.
ಬಾಲಿವುಡ್ ಚಿತ್ರ ಪಠಾಣ್‌ ಪ್ರದರ್ಶನದ ವೇಳೆ ವಿಧ್ವಂಸಕ ಕೃತ್ಯ ಎಸಗಿದ ಆರೋಪ ಹೊತ್ತ ಬಜರಂಗದಳ ನಾಯಕನ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ವಿಚಾರಣಾ ಪ್ರಕ್ರಿಯೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್’ಐ) ರೀತಿಯ ನಿಷೇಧಿತ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ ರೌಡಿಗಳು ತಮ್ಮನ್ನು ನಿಂದಿಸಿದರು. ಅವರ ಆಜ್ಞೆಯಂತೆಯೇ ನಮ್ಮನ್ನು ಬಂಧಿಸಲಾಯಿತು. ಮೊದಲ ಅರ್ಜಿದಾರೆ ಭದ್ರತೆಯ ಕಾರಣಕ್ಕೆ ನಗರ ತೊರೆದು ತಲೆಮರೆಸಿಕೊಳ್ಳಬೇಕಾಯಿತು ಎಂದು ವಿವರಿಸಲಾಗಿದೆ.
ಇಂದೋರ್ ನಗರದಲ್ಲಿ ಕೋಮು ಉನ್ಮಾದದ ವಾತಾವರಣವಿರುವುದರಿಂದ ಅರ್ಜಿದಾರರ ಪರವಾಗಿ ಸ್ಥಳೀಯ ವಕೀಲರು ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಲಾಗಿದೆ. ”ನಗರದಲ್ಲಿ ಮೇಲ್ನೋಟಕ್ಕೆ ಕೆಟ್ಟ ಕೋಮು ವಾತಾವರಣ ಇದ್ದು, ದುರದೃಷ್ಟವಶಾತ್ ಜಿಲ್ಲಾ ನ್ಯಾಯಾಲಯಕ್ಕೂ ಅದರ ಪ್ರಭಾವ ವ್ಯಾಪಿಸಿದೆ. ಅರ್ಜಿದಾರರು ಇಲ್ಲಿಲ್ಲ ನ್ಯಾಯ ಪಡೆಯುವ ಸ್ಥಾನ ಮತ್ತು ಅವರ ಕಾನೂನು ಹಕ್ಕುಗಳು ಸಂಪೂರ್ಣ ಅಪಾಯಕ್ಕೆ ಸಿಲುಕಿವೆ” ಎಂದು ಮನವಿ ಹೇಳಿದೆ.
ತಮ್ಮ ವಿರುದ್ಧದ ಎಫ್’ಐಆರ್ ರದ್ದುಗೊಳಿಸುವುದರ ಜೊತೆಗೆ ಮೊದಲ ಅರ್ಜಿದಾರೆಯ ಬಂಧನಕ್ಕೆ ತಡೆ ನೀಡಬೇಕು ಮತ್ತು ಎರಡನೆಯ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶಿಸಬೇಕು ಎಂದು ಅರ್ಜಿ ವಿನಂತಿಸಿದೆ.
(ಕೃಪೆ: ಬಾರ್ & ಬೆಂಚ್)

- Advertisement -