ಪೂರ್ಣಿಮಾ ಶ್ರೀನಿವಾಸ್ ಗೆ ಡಿಸಿಎಂ ಸ್ಥಾನ ನೀಡಲು ಹಿಂದುಳಿದ ವರ್ಗಗಳ ಒತ್ತಾಯ

Prasthutha|

ಬೆಂಗಳೂರು, ಆ. 2; ಹಿಂದುಳಿದ ವರ್ಗದ ಹಿರಿಯ ನಾಯಕಿ, ಹಿರಿಯೂರು ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಉಪಮುಖ್ಯಮಂತ್ರಿ ಇಲ್ಲವೆ ಸಚಿವ ಸ್ಥಾನ ನೀಡಬೇಕೆಂದು ಹಿಂದುಳಿದ ವರ್ಗಗಳ “ ಕರ್ನಾಟಕ ರಾಜ್ಯ ಪ್ರವರ್ಗ 1 ರ ಜಾತಿಗಳ ಒಕ್ಕೂಟ ಆಗ್ರಹಿಸಿದೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಯಾದವ ಸಮಾಜದ ಮುಖಂಡ ಜಿ.ಡಿ. ಶ್ರೀನಿವಾಸ್, ಒಕ್ಕೂಟದ ಸಣ್ಣ ಸಣ್ಣ ಜಾತಿ ಸಂಘಟನೆಗಳ ಒಕ್ಕೂಟದ ಮುಖಂಡರು, ಸ್ವಾಮೀಜಿಗಳು, 108 ವಿವಿಧ ಜಾತಿಗಳು, 356 ಉಪ ಜಾತಿಗಳನ್ನು ಪೂರ್ಣಿಮಾ ಶ್ರೀನಿವಾಸ್ ಪ್ರತಿನಿಧಿಸುತ್ತಿದ್ದು, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಉಪಮುಖ್ಯಮಂತ್ರಿ ಇಲ್ಲವೆ ಸಚಿವ ಸ್ಥಾನ ನೀಡಿ ಹಿಂದುಳಿದ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದರು.

ಬಿಜೆಪಿಯಿಂದ ಗೊಲ್ಲ ಸಮಾಜದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಏಕೈಕ ಮಹಿಳಾ ಶಾಸಕಿಯಾಗಿದ್ದು, ಇವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಪೂರ್ಣಿಮಾ ಅವರು ಹಿಂದುಳಿದ ಸಮುದಾಯದ ನೇತಾರರಾಗಿ ವಿಧಾನಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸುತ್ತಿದ್ದಾರೆ ಎಂದರು.

- Advertisement -

ರಾಜ್ಯದಲ್ಲಿ 50 ವಿಧಾನಸಭೆಗಳಲ್ಲಿ ಗೆಲುವಿನ ನಿರ್ಣಾಯಕ ಪಾತ್ರ ವಹಿಸುವಲ್ಲಿ ಪ್ರವರ್ಗ 1ರ ಜಾತಿಗಳು ಸಮರ್ಥವಾಗಿವೆ. ಈ ಜಾತಿಯ ಅಡಿಯಲ್ಲಿ ಬರುವ, ಗೊಲ್ಲ, ಉಪ್ಪಾರ, ಬೆಸ್ತ, ಕೋಳಿ , ದೊಂಬಿದಾಸ ಇತ್ಯಾದಿ ಸೇರಿ ಒಟ್ಟು 356 ಉಪಜಾತಿಗಳಿದ್ದು, ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ರಾಜ್ಯದ ಜನಸಂಖ್ಯೆಯಲ್ಲಿ 6ನೇ ಒಂದು ಭಾಗದಷ್ಟಿರುವ ಈ ಜಾತಿಯ ಆಧಾರದ ಮೇಲೆ 15 ರಿಂದ 20 ಕ್ಷೇತ್ರಗಳು ಗೆಲ್ಲಬಹುದಾಗಿದೆ ಎಂದರು.
ರಾಜಕೀಯ ಕುಟುಂಬ ಹಿನ್ನೆಲೆಯಲ್ಲಿ ಬಂದಿರುವ ಇವರ ತಂದೆ ದಿವಂಗತ ಎ. ಕೃಷ್ಣಪ್ಪ ಅವರು ಈ ಹಿಂದೆ ಸಮಾಜಕಲ್ಯಾಣ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಪೂರ್ಣಿಮಾ ಶ್ರೀನಿವಾಸ್ ಹಿಂದುಳಿದ ಜಾತಿಗಳ ಸಂಘಟನೆಯನ್ನು ಒಂದೇ ರಥದಲ್ಲಿ ತೆಗೆದುಕೊಂಡು ಹೋಗುವ ನೈಪುಣ್ಯತೆ ಹೊಂದಿದ್ದಾರೆ. ಇತ್ತೀಚಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಹಿಂದುಳಿದ ಜನಾಂಗದವರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿರುವುದು ತುಂಬಾ ಸಂತಸದ ಸಂಗತಿ. ಅದೇ ರೀತಿ ರಾಜ್ಯದಲ್ಲೂ ಕೂಡ ಹಿಂದುಳಿದ ಜಾತಿಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ. ಹಾಗಾಗಿ ಮಹಿಳಾ ಕೋಟಾದಲ್ಲಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಕಾರ್ಯಾಧ್ಯಕ್ಷ -ಎಚ್.ವಿ ಬಂಡಿ, ಲೋಕೇಶಪ್ಪ-ಗೂರ್ಖಾ ಸಮಾಜ ರಾಜ್ಯಾಧ್ಯಕ್ಷರು, ಜೋಗಮಲ್-ತೇವರ್ ಸಮಾಜದ ರಾಜ್ಯಾಧ್ಯಕ್ಷರು, ನಾಗರಾಜ-ದೊಂಬಿದಾಸ ಸಮಾಜದ ರಾಜ್ಯಾಧ್ಯಕ್ಷ ರಂಗಪ್ಪ ಮತ್ತು ಹೆಳವ ಸಮಾಜದ ಗೌರವಾಧ್ಯಕ್ಷರಾದ ಎಂ.ಎಸ್. ಹೆಳವರ್ ಹಾಜರಿದ್ದರು.



Join Whatsapp