ಕರಾಚಿ: ವಿಶ್ವದಾಖಲೆಯ 203 ರನ್ಗಳ ಜೊತೆಯಾಟದ ಮೂಲಕ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು, ಆತಿಥೇಯ ಪಾಕಿಸ್ತಾನ 10 ವಿಕೆಟ್ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ. ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 200 ರನ್ಗಳ ಸವಾಲನ್ನು ಪಾಕ್, 19.3 ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿತು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಗೆಲುವಿನೆಡೆಗೆ ಮುನ್ನಡೆಸಿದ ನಾಯಕ ಎಂಬ ಕೀರ್ತಿಯೂ ಬಾಬಾರ್ ಪಾಲಾಯಿತು.
ಆರಂಭಿಕರಾದ ಬಾಬರ್ ಅಝಂ 110 ರನ್ ಮತ್ತು ಮುಹಮ್ಮದ್ ರಿಝ್ವಾನ್ 88 ಗಳಿಸಿ ಅಜೇಯರಾಗುಳಿದರು. ಏಷ್ಯಾ ಕಪ್ನಲ್ಲಿ ಬ್ಯಾಟಿಂಗ್ ಮರೆತವರಂತೆ ಆಡಿದ್ದ ನಾಯಕ ಬಾಬರ್ ಅಝಂ, ಆಂಗ್ಲರ ವಿರುದ್ಧ ಭರ್ಜರಿ ಶತಕ ಗಳಿಸುವ ಮೂಲಕ ಫಾರ್ಮ್ಗೆ ಮರಳಿದ್ದಾರೆ. 66 ಎಸೆತಗಳನ್ನು ಎದುರಿಸಿದ ಬಾಬಾರ್, 11 ಬೌಂಡರಿ ಮತ್ತು 5 ಸಿಕ್ಸರ್ಗಳ ನೆರವಿನಿಂದ 110 ರನ್ಗಳಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಬಾಬರ್ ಬ್ಯಾಟ್ನಿಂದ ದಾಖಲಾದ 2ನೇ ಶತಕ ಇದಾಗಿದೆ. ಪಾಕಿಸ್ತಾನ ತಂಡದ ನಾಯಕನಾಗಿ 10ನೇ ಶತಕ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಬಾಬರ್ ಅಝಂ ತನ್ನದಾಗಿಸಿಕೊಂಡರು. ಮುಹಮ್ಮದ್ ರಿಝ್ವಾನ್ 51 ಎಸೆತದಲ್ಲಿ 4 ಸಿಕ್ಸರ್ ಮತ್ತು 5 ಬೌಂಡಿರಿಗಳನ್ನೊಳಗೊಂಡ 88 ರನ್ಗಳಿಸಿದರು.
ಇಂಗ್ಲೆಂಡ್ ಪಾಳಯದಲ್ಲಿ ನಾಯಕ ಮೊಯಿನ್ ಅಲಿ ಸೇರಿದಂತೆ 6 ಮಂದಿ ಬೌಲರ್ಗಳು ಪ್ರಯತ್ನಿಸಿದರೂ, ಪಾಕಿಸ್ತಾನದ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಸಫಲತೆ ಕಾಣಲಿಲ್ಲ. ಸರಣಿಯ ಮೂರನೇ ಪಂದ್ಯ ಇದೇ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ.
ಇಂಗ್ಲೆಂಡ್ 199/5
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಂಗ್ಲನ್ನರು, ನಾಯಕ ಮೊಯಿನ್ ಅಲಿ ಗಳಿಸಿದ ಅರ್ಧಶತಕದ ನೆರವಿನಿಂದ 5 ವಿಕಟ್ ನಷ್ಟದಲ್ಲಿ 199 ರನ್ಗಳಿಸಿತ್ತು. ಆರಂಭಿಕರಾದ ಫಿಲ್ ಸಾಲ್ಟ್ 30 ರನ್, ಅಲೆಕ್ಸ್ ಹೇಲ್ಸ್ 26 ರನ್, ಬೆನ್ ಡಕ್ಕೆಟ್ 43 ರನ್ ಹಾಗೂ ಹ್ಯಾರಿ ಬ್ರೂಕ್ 31 ರನ್ಗಳಿಸಿದ್ದರು.
ಸುದೀರ್ಘ 17 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ, 7 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮೊಯಿನ್ ಅಲಿ ಸಾರಥ್ಯದ ಆಂಗ್ಲ ಪಡೆಯನ್ನು 6 ವಿಕೆಟ್ಗಳಿಂದ ಮಣಿಸಿತ್ತು.
2005ರಲ್ಲಿ ಇಂಗ್ಲೆಂಡ್ ತಂಡ ಕೊನೆಯದಾಗಿ ಪಾಕಿಸ್ತಾನದಲ್ಲಿ ಪಂದ್ಯವನ್ನಾಡಿತ್ತು. ಆ ಬಳಿಕ ಭದ್ರತೆಯ ಕಾರಣವೊಡ್ಡಿ ಪಾಕ್ ಪ್ರವಾಸದಿಂದ ಆಂಗ್ಲನ್ನರು ಹಿಂದೆ ಸರಿದಿದ್ದರು. ಈ ನಡುವೆ ನಿಗದಿಯಾಗಿದ್ದ ಎಲ್ಲ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು